ಇಸ್ರೇಲ್-ಹಮಾಸ್ ಸಂಘರ್ಷ ; ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಚರ್ಚೆ

Update: 2023-11-06 16:30 GMT

 Arindam Bagchi Twitter

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಸೈಯದ್ ಇಬ್ರಾಹಿಂ ರೈಸಿ ಅವರು ಸೋಮವಾರ ಪಶ್ಚಿಮ ಏಶ್ಯಾ ಪ್ರದೇಶದಲ್ಲಿಯ ಕಠಿಣ ಪರಿಸ್ಥಿತಿ ಮತ್ತು ಇಸ್ರೇಲ್-ಹಮಾಸ್ ಸಂಘರ್ಷ ಕುರಿತು ಪರಸ್ಪರ ಅಭಿಪ್ರಾಯಗಳನ್ನು ವಿನಿಮಯಿಸಿಕೊಂಡರು. ಈ ವೇಳೆ ಮೋದಿಯವರು ಭಯೋತ್ಪಾದಕ ಘಟನೆಗಳು, ಹಿಂಸೆ ಮತ್ತು ನಾಗರಿಕರ ಜೀವಹಾನಿ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದರು.

ರೈಸಿ ಅವರೊಂದಿಗೆ ತನ್ನ ದೂರವಾಣಿ ಮಾತುಕತೆಯಲ್ಲಿ ಮೋದಿಯವರು ಇಸ್ರೇಲ್-ಫೆಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲಿಕ ಮತ್ತು ಸ್ಥಿರ ನಿಲುವನ್ನು ಪುನರುಚ್ಚರಿಸಿದರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ರೈಸಿ ಅವರು ಪರಿಸ್ಥಿತಿಯ ಬಗ್ಗೆ ತನ್ನ ಮೌಲ್ಯಮಾಪನವನ್ನು ಮೋದಿಯವರೊಂದಿಗೆ ಹಂಚಿಕೊಂಡರು.

ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯುವ,ನಿರಂತರ ಮಾನವೀಯ ನೆರವನ್ನು ಖಚಿತಪಡಿಸುವ ಮತ್ತು ಶಾಂತಿ ಹಾಗೂ ಸ್ಥಿರತೆಯ ಶೀಘ್ರ ಮರುಸ್ಥಾಪನೆಯ ಅಗತ್ಯಕ್ಕೆ ಉಭಯ ನಾಯಕರು ಒತ್ತು ನೀಡಿದರು.

ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಹಕಾರದಲ್ಲಿಯ ಪ್ರಗತಿಯನ್ನೂ ಉಭಯ ನಾಯಕರು ಪುನರ್‌ಪರಿಶೀಲಿಸಿದರು.

ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಲು ಇರಾನ್‌ನ ಚಬಹಾರ್ ಬಂದರಿಗೆ ನೀಡಿರುವ ಆದ್ಯತೆಯನ್ನು ಮೋದಿ ಮತ್ತು ರೈಸಿ ಸ್ವಾಗತಿಸಿದರು. ಪ್ರಾದೇಶಿಕ ಶಾಂತಿ,ಭದ್ರತೆ ಮತ್ತು ಸ್ಥಿರತೆಯಲ್ಲಿ ತಾವು ಹಂಚಿಕೊಂಡಿರುವ ಆಸಕ್ತಿಯನ್ನು ಪರಿಗಣಿಸಿ ಪರಸ್ಪರ ಸಂಪರ್ಕದಲ್ಲಿರಲು ಉಭಯ ದೇಶಗಳು ಒಪ್ಪಿಕೊಂಡವು ಎಂದು ಹೇಳಿಕೆಯು ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News