ಭಾರೀ ಆಕ್ರೋಶದ ಬಳಿಕ ಜಮ್ಮುಕಾಶ್ಮೀರವನ್ನು ತಪ್ಪಾಗಿ ಬಿಂಬಿಸಿದ್ದ ಭಾರತದ ನಕಾಶೆಯನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದ ಇಸ್ರೇಲ್
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಇಸ್ರೇಲ್ ಭಾಗಶಃ ಜಮ್ಮುಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತಪ್ಪಾಗಿ ಬಿಂಬಿಸಿದ್ದ ಭಾರತದ ನಕಾಶೆಯನ್ನು ದೇಶದ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ನಕಾಶೆಯನ್ನು ತೆಗೆಯಲಾಗಿದೆ, ಅದು ವೆಬ್‌ಸೈಟ್ ಸಂಪಾದಕರ ತಪ್ಪಾಗಿತ್ತು ಎಂದು ಭಾರತದಲ್ಲಿಯ ಇಸ್ರೇಲ್ ರಾಯಭಾರಿ ರೂವೆನ್ ಅಝಾರ್ ತಿಳಿಸಿದರು.
ಈ ವಿಷಯವನ್ನು ಎಕ್ಸ್‌ನಲ್ಲಿ ಮೊದಲು ಬೆಟ್ಟು ಮಾಡಿದ್ದ ಬಳಕೆದಾರರೋರ್ವರು, ‘ಭಾರತವು ಇಸ್ರೇಲ್‌ನೊಂದಿಗಿದೆ, ಆದರೆ ಇಸ್ರೇಲ್ ಭಾರತದ ಜೊತೆಯಲ್ಲಿದೆಯೇ? ಇಸ್ರೇಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಭಾರತದ ನಕಾಶೆಯನ್ನು, ಜಮ್ಮುಕಾಶ್ಮೀರವನ್ನು ಗಮನಿಸಿ ’ ಎಂದು ಬರೆದಿದ್ದರು.
Website editor’s mistake. Thank you for noticing. Was taken down. https://t.co/4bEYV1vFTC https://t.co/aVeomWyfh8
— Reuven Azar (@ReuvenAzar) October 4, 2024
ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಝಾರ್, ‘ವೆಬ್‌ಸೈಟ್ ಸಂಪಾದಕರಿಂದ ತಪ್ಪಾಗಿದೆ, ಗಮನಿಸಿದ್ದಕ್ಕೆ ಧನ್ಯವಾದಗಳು. ನಕಾಶೆಯನ್ನು ತೆಗೆಯಲಾಗಿದೆ’ ಎಂದು ಹೇಳಿದ್ದಾರೆ.
ಜಮ್ಮುಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಕೇಂದ್ರ ಸರಕಾರವು ಸದಾ ಪ್ರತಿಪಾದಿಸಿದೆ.
ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಂದರ್ಭ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರು, ದೇಶಗಳ ಒಂದು ಗುಂಪನ್ನು ‘ಶಾಪ’ ಮತ್ತು ಇನ್ನೊಂದು ಗುಂಪನ್ನು‘ವರ’ ಎಂದು ತೋರಿಸಿದ್ದ ಎರಡು ನಕಾಶೆಗಳನ್ನು ಪ್ರದರ್ಶಿಸಿದ್ದರು.
ಕಪ್ಪು ಬಣ್ಣದಲ್ಲಿ ಚಿತ್ರಿಸಲಾಗಿದ್ದ ಇರಾನ್,ಇರಾಕ್,ಸಿರಿಯಾ ಮತ್ತು ಯೆಮೆನ್‌ಗಳನ್ನು‘ಶಾಪ’ವನ್ನಾಗಿ ಹಾಗೂ ಹಸಿರು ಬಣ್ಣದಲ್ಲಿ ಚಿತ್ರಿಸಲಾಗಿದ್ದ ಈಜಿಪ್ಟ್, ಸುಡಾನ್, ಸೌದಿ ಅರೇಬಿಯಾ ಮತ್ತು ಭಾರತಗಳನ್ನು ‘ವರ’ವನ್ನಾಗಿ ಬಣ್ಣಿಸಲಾಗಿತ್ತು.
ಕುತೂಹಲಕಾರಿಯಾಗಿ ಈ ಎರಡೂ ನಕಾಶೆಗಳು ಫೆಲೆಸ್ತೀನ್ ಪ್ರದೇಶಗಳಾದ ಪಶ್ಚಿಮ ದಂಡೆ ಮತ್ತು ಗಾಝಾವನ್ನು ಇಸ್ರೇಲ್‌ನ ಭಾಗವಾಗಿ ತೋರಿಸಿದ್ದವು. ಸಿರಿಯಾದ ಗೋಲನ್ ಹೈಟ್ಸ್ ಪ್ರದೇಶವನ್ನೂ ಇಸ್ರೇಲ್‌ನ ಭಾಗವಾಗಿ ಬಿಂಬಿಸಲಾಗಿತ್ತು.