ಜಾರ್ಖಂಡ್ | ʼಆದಿವಾಸಿ ವಿರೋಧಿಗಳುʼ ಎಂದು ಅಣಕಿಸಿದ ಬಿಜೆಪಿಯ ವೀಡಿಯೊ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಹೊಸದಿಲ್ಲಿ: ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಹಾಗೂ ಆರ್ಜೆ ಡಿ ನಾಯಕರು ಆದಿವಾಸಿ ವಿರೋಧಿಗಳು ಎಂದು ಅಣಕಿಸಿ ಬಿಜೆಪಿ ಬಿಡುಗಡೆಗೊಳಿಸಿರುವ ವೀಡಿಯೊ ಜಾಹೀರಾತಿನ ವಿರುದ್ಧ ರವಿವಾರ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ಮೆಟ್ಟಿಲೇರಿದೆ.
ರಾಹುಲ್ ಗಾಂಧಿ, ಹೇಮಂತ್ ಸೊರೇನ್, ಕಲ್ಪನಾ ಸೊರೇನ್ ಹಾಗೂ ತೇಜಸ್ವಿ ಯಾದವ್ ಅವರನ್ನೇ ಹೋಲುವ ವ್ಯಕ್ತಿಗಳಿಂದ ಅವರದ್ದೆಂದು ವೀಡಿಯೊ ಜಾಹೀರಾತಿನಲ್ಲಿ ಹೇಳಲಾಗಿರುವ ಹೇಳಿಕೆಗಳು ನಿರ್ಲಜ್ಜ ಸುಳ್ಳುಗಳು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈ ವೀಡಿಯೊವನ್ನು ಜಾರ್ಖಂಡ್ ನ ಬಿಜೆಪಿಯ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.
“ಈ ವೀಡಿಯೊದಲ್ಲಿರುವ ಆರೋಪಗಳ ಪೈಕಿ ಈ ನಾಯಕರೆಲ್ಲ ಆದಿವಾಸಿ ವಿರೋಧಿಗಳಾಗಿದ್ದು, ಕೊನೆಯದಾಗಿ ತಮ್ಮ ವೈಯಕ್ತಿಕ ಕಾರ್ಯಸೂಚಿಗಳನ್ನು ಸಾಧಿಸಿಕೊಳ್ಳಲು ಆದಿವಾಸಿಗಳ ಪರ ಸೋಗಿನಲ್ಲಿ ಒಗ್ಗೂಡಿದ್ದಾರೆ ಎಂಬ ಆರೋಪವೂ ಸೇರಿದೆ” ಎಂದು ಅವರು ಪತ್ರದಲ್ಲಿ ದೂರಿದ್ದಾರೆ.
ಜಾರ್ಖಂಡ್ ನ ಬಿಜೆಪಿಯು ಬಿಡುಗಡೆ ಮಾಡಿರುವ ವೀಡಿಯೊ ಜಾಹೀರಾತಿನಲ್ಲಿ, ದುಡ್ಡು ಕೊಟ್ಟು ಪ್ರಶ್ನೆ ಪತ್ರಿಕೆಗಳನ್ನು ಮುಂಗಡವಾಗಿ ಪಡೆಯಿರಿ ಎಂದು ಇಂಡಿಯಾ ಮೈತ್ರಿಕೂಟದ ನಾಯಕರು ಹೇಳುತ್ತಿರುವುದು, ಮಾಜಿ ಪ್ರಧಾನಿಯೊಬ್ಬರು ಜಾರ್ಖಂಡ್ ರಾಜ್ಯಕ್ಕಾಗಿ ಹೋರಾಟ ನಡೆಸಿದವರ ಮೇಲೆ ಗುಂಡಿನ ದಾಳಿ ನಡೆಸಿ ಎಂದು ಆದೇಶಿಸುತ್ತಿರುವುದು ಹಾಗೂ ಒಂದು ಪಕ್ಷ ಪ್ರತ್ಯೇಕ ರಾಜ್ಯವನ್ನು ವಿರೋಧಿಸುತ್ತಿರುವುದು ಸೇರಿವೆ.
ಸೌಜನ್ಯ : deccanherald.com