ಜೂ. 9ರಂದು ಪ್ರೇಮ್ ಸಿಂಗ್ ತಮಾಂಗ್ ಸಿಕ್ಕಿಂನ ಮುಖ್ಯಮಂತ್ರಿಯಾಗಿ ಪ್ರಮಾಣ
ಗ್ಯಾಂಗ್ಟಕ್ : ಸಿಕ್ಕಿಂನ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ತಾನು ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ವರಿಷ್ಠ ಪ್ರೇಮ್ ಸಿಂಗ್ ತಮಾಂಗ್ ಅವರು ಬುಧವಾರ ಹೇಳಿದ್ದಾರೆ.
ಪ್ರೇಮ್ ಸಿಂಗ್ ತಮಾಂಗ್ ಹಾಗೂ ಅವರ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜ್ಯದ ರಾಜಧಾನಿ ಗ್ಯಾಂಗ್ಟಕ್ನಲ್ಲಿರುವ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಿಕ್ಕಿಂನ ವಿವಿಧ ಭಾಗದಿಂದ ದೊಡ್ಡ ಸಂಖ್ಯೆಯ ಜನರು ಹಾಗೂ ಎಸ್ಕೆಎಂನ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಸಿಕ್ಕಿಂ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಯ ಒಂದೇ ಕ್ಷೇತ್ರದಲ್ಲಿ ಆಡಳಿತಾರೂಢ ಎಸ್ಕೆಎಂ ಅಭೂತಪೂರ್ವ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಮಾಂಗ್ ಅವರು ಪಕ್ಷದಲ್ಲಿ ನಂಬಿಕೆ ಇರಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಿದರು.
ಲೋಕಸಭೆ ಚುನಾವಣೆಯೊಂದಿಗೆ 32 ಸ್ಥಾನಗಳಿಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಎಸ್ಕೆಎಂ 31 ಸ್ಥಾನಗಳನ್ನು ಪಡೆದುಕೊಂಡಿದೆ. ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಭರ್ಜರಿ ಜಯ ಗಳಿಸಲು ಬದ್ದರಾಗಿ ಹಾಗೂ ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದ ಎಸ್ಕೆಎಂ ನಾಯಕರು ಹಾಗೂ ಕಾರ್ಯಕರ್ತರಿಗೆ ತಮಾಂಗ್ ಅವರು ಕೃತಜ್ಞತೆ ಸಲ್ಲಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ತಮಾಂಗ್ ಅವರು ಸಂಸದ ಇಂದ್ರ ಹಂಗ್ ಸುಬ್ಭಾ ಅವರು ಕೇಂದ್ರದಲ್ಲಿರುವ ಎನ್ಡಿಎಯ ಭಾಗವಾಗಲಿದ್ದಾರೆ ಎಂದು ಹೇಳಿದ್ದಾರೆ.