ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಆಯ್ಕೆ ಪ್ರಶ್ನಿಸಿ ಅರ್ಜಿ: ಸಂಸದೆಗೆ ಹೈಕೋರ್ಟ್ ನೋಟಿಸ್
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದೆಯಾಗಿ ಕಂಗನಾ ರಣಾವತ್ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಕಂಗನಾಗೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿಯನ್ನು ಕಿನ್ನೌರ್ ನಿವಾಸಿ ಲಾಯಕ್ ರಾಮ್ ನೇಗಿ ಅವರು ಸಲ್ಲಿಸಿದ್ದು ತಾವು ಸಲ್ಲಿಸಿದ್ದ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಕಂಗನಾಗೆ ಸಲ್ಲಿಸಲಾಗಿರುವ ನೋಟಿಸ್‌ನಲ್ಲಿ ಆಗಸ್ಟ್ 21ರೊಳಗೆ ಉತ್ತರಿಸುವಂತೆ ಅವರಿಗೆ ಸೂಚಿಸಲಾಗಿದೆ.
ಕಂಗನಾ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು ಸೋಲಿಸಿ 74,755 ಮತಗಳ ಅಂತರದಿಂದ ಮಂಡಿ ಕ್ಷೇತ್ರದಲ್ಲಿ ಜಯ ಗಳಿಸಿದ್ದರು.
ಲಾಯಕ್ ರಾಮ್ ನೇಗಿ ಸಲ್ಲಿಸಿರುವ ಅರ್ಜಿಯಲ್ಲಿ ಮಂಡಿ ಜಿಲ್ಲಾಧಿಕಾರಿಗಳನ್ನೂ ಪ್ರತಿವಾದಿಯನ್ನಾಗಿಸಲಾಗಿದೆ. ರಿಟರ್ನಿಂಗ್ ಆಫೀಸರ್ ಆಗಿದ್ದ ಅವರು ತಮ್ಮ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಿದ್ದರು ಎಂದು ಅರ್ಜಿದಾರ ಹೇಳಿದ್ದಾರೆ.
ಅರಣ್ಯ ಇಲಾಖೆಯ ಮಾಜಿ ಉದ್ಯೋಗಿಯಾಗಿರುವ ನೇಗಿ ಅವಧಿ ಪೂರ್ವ ನಿವೃತ್ತರಾಗಿದ್ದು ನಾಮಪತ್ರ ಸಲ್ಲಿಕೆ ವೇಳೆ ಇಲಾಖೆಯಿಂದ ಪಡೆದ “ನೋ ಡ್ಯೂಸ್ ಸರ್ಟಿಫಿಕೇಟ್” ಕೂಡ ಹಾಜರುಪಡಿಸಿದ್ದಾಗಿ ತಿಳಿಸಿದ್ದಾರೆ.
ಆದರೆ ವಿದ್ಯುತ್, ಜಲ ಮತ್ತು ಟೆಲಿಫೋನ್ ಇಲಾಖೆಗಳಿಂದ ಇಂತಹುದೇ ಪ್ರಮಾಣಪತ್ರ ಸಲ್ಲಿಸಲು ಅವರಿಗೆ ಒಂದು ದಿನ ಕಾಲಾವಕಾಶ ನೀಡಲಾಗಿತ್ತು. ಅವರು ನಂತರ ಅವುಗಳನ್ನು ಸಲ್ಲಿಸಿದಾಗ ಅವುಗಳನ್ನು ಸ್ವೀಕರಿಸದೆ ಅವರ ನಾಮಪತ್ರ ತಿರಸ್ಕರಿಸಲಾಗಿತ್ತು.
ತಮ್ಮ ನಾಮಪತ್ರ ಸ್ವೀಕರಿಸಲಾಗಿದ್ದರೆ ತಾವು ಚುನಾವಣೆ ಗೆಲ್ಲುತ್ತಿದ್ದುದಾಗಿ ಹೇಳಿರುವ ಅರ್ಜಿದಾರರು ಕಂಗನಾ ಆಯ್ಕೆಯನ್ನು ರದ್ದುಗೊಳಿಸಬೇಕೆಂದು ಕೋರಿದ್ದಾರೆ.