ಚೀನಿ ವೀಸಾ ಪ್ರಕರಣ | ಕಾರ್ತಿ ಚಿದಂಬರಂ ಆಪ್ತ ಸಹಾಯಕನ ಮೂಲಕ 50 ಲಕ್ಷ ರೂ.ಲಂಚ ಪಡೆದಿದ್ದರು: ಈ.ಡಿ

Update: 2024-03-21 15:37 GMT

Photo: PTI

ಹೊಸದಿಲ್ಲಿ : ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಪಂಜಾಬಿನಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಿದ್ದ ಕಂಪನಿಯಿಂದ ಚೀನಿ ಸಿಬ್ಬಂದಿಗಳಿಗೆ ವೀಸಾಗಳ ಮರುಬಳಕೆಗೆ ಕೇಂದ್ರ ಗೃಹ ಸಚಿವಾಲಯದ ಅನುಮತಿಯನ್ನು ಕೊಡಿಸಲು ಆಪ್ತ ಸಹಾಯಕನ ಮೂಲಕ 50 ಲಕ್ಷ ರೂ. ಲಂಚವನ್ನು ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯ (ಈಡಿ)ವು ಗುರುವಾರ ಆರೋಪಿಸಿದೆ.

ಕಾರ್ತಿ ನಿರ್ದೇಶಕರಾಗಿದ್ದ ಮತ್ತು ನಿಯಂತ್ರಣವನ್ನು ಹೊಂದಿದ್ದ ಕಂಪನಿಯಿಂದಕ್ಕೆ ‘ಕಾಲ್ಪನಿಕ ’ ನಗದು ವಹಿವಾಟಿನ ಮೂಲಕ ಈ ಲಂಚವನ್ನು ಹಸ್ತಾಂತರಿಸಲಾಗಿತ್ತು ಎಂದು ಅದು ಆರೋಪಿಸಿದೆ.

ಈಡಿ ಪ್ರಕರಣದಲ್ಲಿ ತಮಿಳುನಾಡಿನ ಶಿವಗಂಗಾ ಸಂಸದರಾಗಿರುವ ಕಾರ್ತಿಯವರ ಹೇಳಿಕೆಯನ್ನು ಹಲವಾರು ಸಲ ದಾಖಲಿಸಿಕೊಂಡಿದೆ.

ಕಾರ್ತಿ, ಅವರು ಪ್ರವರ್ತಕರಾಗಿದ್ದೆನ್ನಲಾದ ಕಂಪನಿ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ.ಲಿ.,ಅವರ ಆಪ್ತಸಹಾಯಕ ಹಾಗೂ ಅಕೌಂಟಂಟ್ ಎಸ್.ಭಾಸ್ಕರ ರಾಮನ್ ಮತ್ತು ಚೀನಿ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದ ತಲ್ವಂಡಿ ಸಾಬೋ ಪವರ್ ಲಿ. ಮತ್ತು ಇತರರ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈಡಿ ಈ ಆರೋಪವನ್ನು ಮಾಡಿದೆ.

ದಿಲ್ಲಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಆ.15ರಂದು ತನ್ನ ಮುಂದೆ ಹಾಜರಾಗುವಂತೆ ಕಾರ್ತಿ ಸೇರಿದಂತೆ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ ಎಲ್ಲ ಆರೋಪಿಗಳಿಗೆ ಮಾ.19ರಂದು ಸಮನ್ಸ್ ಹೊರಡಿಸಿದೆ.

ಚೀನಿ ವೀಸಾಗಳ ಮರುಬಳಕೆಗೆ ಗೃಹಸಚಿವಾಲಯದಿಂದ ಅನುಮೋದನೆಯನ್ನು ಪಡೆದುಕೊಳ್ಳಲು ತಲ್ವಂಡಿ ಕಂಪನಿಯು ಕಾರ್ತಿಯವರನ್ನು ಸಂಪರ್ಕಿಸಿತ್ತು. ಆಗ ಕಾರ್ತಿಯವರ ತಂದೆ ಪಿ.ಚಿದಂಬರಂ ಅವರು ಕೇಂದ್ರ ಗೃಹಸಚಿವರಾಗಿದ್ದರು. ಅದಕ್ಕಾಗಿ ಕಾರ್ತಿ ತನ್ನ ಆಪ್ತ ಸಹಾಯಕ ಭಾಸ್ಕರರಾಮನ್ ಮೂಲಕ 50 ಲ.ರೂ.ಗಳ ಲಂಚವನ್ನು ಸ್ವೀಕರಿಸಿದ್ದರು ಎಂದು ಈ.ಡಿ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News