ಕೇದಾರನಾಥ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ

Update: 2024-09-10 16:01 GMT

PC : PTI 

ಡೆಹ್ರಡೂನ್: ಮಂಗಳವಾರ ಅವಶೇಷಗಳಡಿ ಇನ್ನೂ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು,ಇದರೊಂದಿಗೆ ಸೋಮವಾರ ಕೇದಾರನಾಥ ಮಾರ್ಗದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.

ಅವಶೇಷಗಳಡಿ ಇನ್ನಷ್ಟು ಯಾತ್ರಿಗಳು ಸಿಕ್ಕಿ ಹಾಕಿಕೊಂಡಿರಬಹುದು ಎಂದು ರುದ್ರಪ್ರಯಾಗ ಪೋಲಿಸರು ತಿಳಿಸಿದರು.

ಸೋಮವಾರ ಇಳಿಸಂಜೆ 7:20ರ ಸುಮಾರಿಗೆ ಕೇದಾರನಾಥದಿಂದ ಮರಳುತ್ತಿದ್ದ ಯಾತ್ರಿಗಳ ಗುಂಪು ಭೂಕುಸಿತಕ್ಕೆ ಸಿಲುಕಿತ್ತು. ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿದ್ದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಮಧ್ಯಪ್ರದೇಶದ ಧಾರ್ ನಿವಾಸಿ ಗೋಪಾಲ(50) ಎನ್ನುವವರ ಶವವನ್ನು ಹೊರಕ್ಕೆ ತೆಗೆದಿದ್ದರು. ಇತರ ಮೂವರನ್ನು ರಕ್ಷಿಸಿ ಆ್ಯಂಬುಲೆನ್ಸ್‌ನಲ್ಲಿ ಸೋನಪ್ರಯಾಗಕ್ಕೆ ರವಾನಿಸಲಾಗಿತ್ತು. ಪ್ರತಿಕೂಲ ಹವಾಮಾನ ಮತ್ತು ರಾತ್ರಿಯಿಡೀ ಗುಡ್ಡದ ಮೇಲಿನಿಂದ ಬಂಡೆಗಳು ಉರುಳುತ್ತಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯ ಪುನರಾರಂಭಗೊಂಡಿದ್ದು ಅವಶೇಷಗಳಡಿಯಿಂದ ಇನ್ನೂ ನಾಲ್ವರು ಯಾತ್ರಿಗಳ ಶವಗಳನ್ನು ಹೊರತೆಗೆಯಲಾಗಿದೆ.

ಮೃತರನ್ನು ಮಧ್ಯಪ್ರದೇಶದ ದುರ್ಗಾಬಾಯಿ ಖಾಪರ್(50) ಮತ್ತು ಸಮನಬಾಯಿ (50),ನೇಪಾಳದ ತಿತ್ಲಿ ದೇವಿ (70) ಮತ್ತು ಗುಜರಾತಿನ ಭರತಭಾಯಿ ನಿರಾಲಾಲ್(52) ಎಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News