ಜೈಲಿನಲ್ಲಿ ಕೇಜ್ರಿವಾಲ್‌ಗೆ ಕುಟುಂಬದೊಂದಿಗೆ ವೈಯಕ್ತಿಕ ಭೇಟಿಗೆ ಅವಕಾಶ ನೀಡುತ್ತಿಲ್ಲ: ಸಂಜಯ್ ಸಿಂಗ್ ಆರೋಪ

Update: 2024-04-13 15:33 GMT

 ಸಂಜಯ್ ಸಿಂಗ್ | PC : PTI 

ಹೊಸದಿಲ್ಲಿ,ಎ.13: ತಿಹಾರ ಜೈಲಿನಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತನ್ನ ಕುಟುಂಬ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗಲು ಅವಕಾಶ ನೀಡಲಾಗುತ್ತಿಲ್ಲ ಎಂದು ಹಿರಿಯ ಆಪ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಶನಿವಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್,ಕೇಜ್ರಿವಾಲ್ ಅವರ ನೈತಿಕ ಸ್ಥೈರ್ಯವನ್ನು ಉಡುಗಿಸುವ ಪ್ರಯತ್ನ ನಡೆಯುತ್ತಿದೆ. ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಕುಟುಂಬಕ್ಕೆ ಬಿಡುತ್ತಿಲ್ಲ. ಕಬ್ಬಿಣದ ಜಾಲರಿ ಅಳವಡಿಸಿರುವ ಕಿಟಕಿಯ ಮೂಲಕ ಮಾತನಾಡಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಇದು ಅಮಾನವೀಯ. ಕಟ್ಟರ್ ಕ್ರಿಮಿನಲ್‌ಗಳಿಗೂ ವೈಯಕ್ತಿಕ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಕಿಡಿಕಾರಿದರು.

ಸಿಂಗ್ ಆರೋಪಗಳಿಗೆ ತಿಹಾರ ಜೈಲಿನ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಶುಕ್ರವಾರ ಜೈಲು ಅಧಿಕಾರಿಗಳು ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ್ ಅವರು ಕೇಜ್ರಿವಾಲ್‌ರನ್ನು ಭೇಟಿಯಾಗಲು ಎ.15ರಂದು ಸಮಯ ನಿಗದಿಗೊಳಿಸಿದ್ದಾರೆ. ಅವರಿಗೂ ವೈಯಕ್ತಿಕ ಭೇಟಿಗೆ ಅವಕಾಶ ನೀಡಲಾಗಿಲ್ಲ,ಅವರೂ ಕಿಟಕಿಯ ಮೂಲಕವೇ ಕೇಜ್ರಿವಾಲ್ ಜೊತೆ ಮಾತನಾಡಬೇಕಿದೆ.

ಮಂಗಳವಾರ ಕೇಜ್ರಿವಾಲ್ ಅವರು ಜೈಲಿನಲ್ಲಿ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ತನ್ನ ಆಪ್ತ ಕಾರ್ಯದರ್ಶಿ ಬಿಭವ ಕುಮಾರ್ ಅವರನ್ನು ಭೇಟಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News