ಕೇರಳ : ಆನೆಗಳ ಹಾವಳಿಯನ್ನು ತಡೆಯಲು ಸುಧಾರಿತ ಕ್ಯಾಮೆರಾ ನಿಯೋಜನೆ, ವಾಟ್ಸ್ ಆ್ಯಪ್ ಗುಂಪುಗಳ ರಚನೆ

Update: 2024-02-19 15:58 GMT

Photo: PTI 

ಕೊಚ್ಚಿ: ಕಳೆದ ಮೂರು ವಾರಗಳಲ್ಲಿ ಆನೆ ದಾಳಿಯಲ್ಲಿ ಮೂರು ಮಂದಿ ಮೃತ ಪಟ್ಟ ಬೆನ್ನಿಗೇ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಸ್ಥಳೀಯ ಪ್ರಾಧಿಕಾರಗಳು ನೂರಾರು ಕ್ಯಾಮೆರಾಗಳನ್ನು ನಿಯೋಜಿಸಿ, ಗಸ್ತನ್ನು ತೀವ್ರಗೊಳಿಸುವ ಮೂಲಕ ಈ ಸಮಸ್ಯೆಯನ್ನು ತಹಬಂದಿಗೆ ತರಬಹುದು ಎಂಬ ಆಶಾಭಾವ ಹೊಂದಿವೆ.

ತೀರಾ ಇತ್ತೀಚಿನ ಘಟನೆಯಲ್ಲಿ ದಟ್ಟಾರಣ್ಯ ಹೊಂದಿರುವ ವಯನಾಡು ಪ್ರದೇಶದಲ್ಲಿನ ಪುಲ್ಪಲ್ಲಿ ಪಟ್ಟಣದಲ್ಲಿ ಶುಕ್ರವಾರ ಆನೆಗಳು ಹಿಂಡೊಂದು ಪ್ರವಾಸಿ ಮಾರ್ಗದರ್ಶಕರೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆನೆಗಳ ದಾಳಿಯನ್ನು ವಿರೋಧಿಸಿ ಸಾವಿರಾರು ಜನರು ಪಟ್ಟಣದಲ್ಲಿ ಶನಿವಾರ ರಸ್ತೆ ತಡೆ ನಡೆಸಿದರು ಹಾಗೂ ಅರಣ್ಯ ಇಲಾಖೆಗೆ ಸೇರಿದ ವಾಹನಗಳನ್ನು ಧ್ವಂಸಗೊಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು ಎಂದು ವರದಿಯಾಗಿದೆ.

ಆದರೆ, ಆನೆಗಳ ದಾಳಿಗೆ ಅರಣ್ಯ ನಾಶ ಪ್ರಮುಖ ಕಾರಣ ಎಂದು ಪರಿಸರವಾದಿಗಳು ದೂಷಿಸಿದ್ದು, ಆನೆಗಳನ್ನು ತಮ್ಮ ನೈಸರ್ಗಿಕ ತಾಣಗಳಿಂದ ಹೆಚ್ಚು ಹೆಚ್ಚು ನಿರ್ಮಾಣ ಪ್ರದೇಶಗಳತ್ತ ದೂಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಯೋಜಿಸಿದ್ದ ಸಭೆಯಲ್ಲಿ, 250 ಸುಧಾರಿತ ಕ್ಯಾಮೆರಾಗಳನ್ನು ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ವಹಿಸಲು ಅರಣ್ಯದ ಗಡಿ ಭಾಗ ಮತ್ತು ವನ್ಯಜೀವಿ ಕಾರಿಡಾರ್‌ಗಳಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ.

ಇದರೊಂದಿಗೆ ದಿನದ 24 ಗಂಟೆಯೂ ರಾಜ್ಯದ ಅರಣ್ಯಗಳಲ್ಲಿ ಗಸ್ತು ನಡೆಸುವಂತೆ ಅರಣ್ಯ ಇಲಾಖೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಪಿಣರಾಯಿ ವಿಜಯನ್ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News