ರಾಜ್ಯದ ಹೆಸರನ್ನು ʼಕೇರಳಂʼ ಎಂದು ಬದಲಾಯಿಸಲು ಕೇಂದ್ರವನ್ನು ಕೋರಲು ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
ತಿರುವನಂತಪುರಂ: ಕೇರಳ ರಾಜ್ಯದ ಹೆಸರನ್ನು ʼಕೇರಳಂʼ ಎಂದು ಬದಲಾಯಿಸಲು ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರವನ್ನು ಕೋರುವ ನಿರ್ಣಯವನ್ನು ಕೇರಳ ವಿಧಾನಸಭೆ ಇಂದು ಅಂಗೀಕರಿಸಿದೆ. ಇಂತಹುದೇ ನಿರ್ಣಯವನ್ನು ವಿಧಾನಸಭೆ ಒಂದು ವರ್ಷದ ಹಿಂದೆ ಅಂಗೀಕರಿಸಿದ್ದರೆ ಈ ಬಾರಿಯ ನಿರ್ಣಯದಲ್ಲಿ ಅಲ್ಪ ಮಾರ್ಪಾಡುಗಳಿವೆ.
ಹಿಂದಿನ ನಿರ್ಣಯವನ್ನು ಕೇಂದ್ರ ಸರ್ಕಾರ ಕೆಲವೊಂದು ತಿದ್ದುಪಡಿಗಳನ್ನು ಉಲ್ಲೇಖಿಸಿ ವಾಪಸ್ ಕಳಿಸಿದ ನಂತರ ಇಂದು ಹೊಸ ನಿರ್ಣಯ ಕೈಗೊಳ್ಳಲಾಗಿದೆ.
ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿರ್ಣಯವು ಸಂವಿಧಾನದ ವಿಧಿ 3 ಅನ್ವಯ ಕೆಲವೊಂದು ತಿದ್ದುಪಡಿಗಳನ್ನು ತಂದು ರಾಜ್ಯದ ಹೆಸರನ್ನು ಸಂವಿಧಾನದ ಮೊದಲನೇ ಶೆಡ್ಯೂಲ್‌ನಲ್ಲಿ ಕೇರಳಂ ಎಂದು ಅಧಿಕೃತವಾಗಿ ಬದಲಾಯಿಸಬೇಕೆಂದು ಕೋರಿದೆ.
ಈ ಹಿಂದೆ ಇಂತಹುದೇ ನಿರ್ಣಯವನ್ನು ರಾಜ್ಯ ವಿಧಾನಸಭೆ ಕಳೆದ ವರ್ಷದ ಆಗಸ್ಟ್ 9ರಂದು ಕೈಗೊಂಡಿತ್ತು. ಆದರೆ ಆಗ ಸಂವಿಧಾನದ ಮೊದನಲೇ ಶೆಡ್ಯೂಲ್‌ನಲ್ಲಿ ರಾಜ್ಯದ ಹೆಸರು ಬದಲಾಯಿಸಬೇಕು ಹಾಗು ಎಂಟನೇ ಶೆಡ್ಯೂಲ್‌ನಲ್ಲೂ ಎಲ್ಲಾ ಭಾಷೆಗಳಲ್ಲಿ ಕೇರಳಂ ಎಂದು ಬದಲಾಯಿಸಬೇಕೆಂದು ಕೋರಿತ್ತು.
ಆದರೆ ತಿದ್ದುಪಡಿ ಕೇವಲ ಮೊದಲನೇ ಶೆಡ್ಯೂಲ್‌ನಲ್ಲಿ ಮಾತ್ರ ಅಗತ್ಯ ಎಂದು ತಿಳಿದು ಬಂದ ನಂತರ ಹೊಸ ನಿರ್ಣಯ ಅಂಗೀಕರಿಸಲಾಗಿದೆ ಎಂದು ಪಿಣರಾಯಿ ವಿಜಯನ್ ವಿವರಿಸಿದ್ದಾರೆ.
ರಾಜ್ಯದಲ್ಲಿ ಮಲಯಾಳಂ ಭಾಷೆಯಲ್ಲಿ ಕೇರಳಂ ಪದದ ಪ್ರಯೋಗ ನಡೆಯುತ್ತಿದ್ದರೂ ಅಧಿಕೃತ ದಾಖಲೆಗಳಲ್ಲಿ ಕೇರಳ ಪದ ಬಳಕೆ ಇರುವುದರಿಂದ ತಿದ್ದುಪಡಿಗೆ ಕೋರಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.