ಕೇರಳ ಸರಕಾರಿ ಆಸ್ಪತ್ರೆಯ ವೈದ್ಯರ ಎಡವಟ್ಟು | ಬಾಲಕಿಯ ಕೈಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ!

Update: 2024-05-16 17:00 GMT

ಕೋಝಿಕ್ಕೋಡ್ ನ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ

ಕೋಝಿಕ್ಕೋಡ್ : ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಕೋಝಿಕ್ಕೋಡ್ ನ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಗುರುವಾರ ನಾಲ್ಕರ ಹರೆಯದ ಬಾಲಕಿಯ ಕೈಬೆರಳಿನ ಬದಲು ತಪ್ಪಾಗಿ ನಾಲಿಗೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಬಾಲಕಿಯ ಕೈಯಲ್ಲಿ ಆರು ಬೆರಳುಗಳಿದ್ದು, ಆರನೇ ಬೆರಳನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಿಗದಿಗಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಬಾಯಿಯೊಳಗೆ ಹತ್ತಿಯನ್ನು ತುಂಬಿಕೊಂಡಿದ್ದ ಬಾಲಕಿಯನ್ನು ಹೊರತಂದಾಗ ವೈದ್ಯರ ಎಡವಟ್ಟು ಬೆಳಕಿಗೆ ಬಂದಿದೆ. ಬಾಲಕಿಯ ಕೈಯಲ್ಲಿ ಆರನೇ ಬೆರಳು ಯಥಾಸ್ಥಿತಿಯಲ್ಲಿದ್ದು ವೈದ್ಯರು ನಾಲಿಗೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಈ ಘಟನೆಯ ಕುರಿತು ತಕ್ಷಣ ತನಿಖೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕೇರಳದ ಆರೋಗ್ಯ ಸಚಿವೆ ಮೀನಾ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ಬಾಲಕಿಯು ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಘೋರ ವೈದ್ಯಕೀಯ ನಿರ್ಲಕ್ಷಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಕೋರಿ ಪೋಲಿಸ್ ದೂರು ಸಲ್ಲಿಸಲು ಕುಟುಂಬವು ಸಜ್ಜಾಗಿದೆ.

ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಂತಹ ಅನುಭವ ಬೇರೆ ಯಾರಿಗೂ ಆಗಬಾರದು. ಬಾಲಕಿಗೆ ನಾಲಿಗೆಯ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದರು.

ಈ ಶಸ್ತ್ರಚಿಕಿತ್ಸೆಯಿಂದಾಗಿ ಬಾಲಕಿಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮಗಳಿಗೆ ಆಸ್ಪತ್ರೆಯ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಕುಟುಂಬವು ಹೇಳಿದೆ.

ಒಂದೇ ದಿನ ಇಬ್ಬರು ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿದ್ದು ಈ ತಪ್ಪಿಗೆ ಕಾರಣವಾಗಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News