ವಯನಾಡ್ ಭೂಕುಸಿತ ಸಂತ್ರಸ್ತರಿಗೆ ನೆರವು ನೀಡುವಂತೆ ಕೇರಳ ಸರಕಾರಕ್ಕೆ ಒತ್ತಡ ಹೇರಬೇಕು : ರಾಹುಲ್ ಗಾಂಧಿ

Update: 2024-11-30 20:51 IST
Photo of Rahul Gandhi

ನಾಯಕ ರಾಹುಲ್ ಗಾಂಧಿ | PC : PTI

  • whatsapp icon

ವಯನಾಡ್ : ವಯನಾಡ್ ಭೂಕುಸಿತ ಸಂತ್ರಸ್ತರಿಗೆ ನೆರವು ನೀಡುವಂತೆ ನಾವು ಕೇರಳ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತನ್ನ ಪಕ್ಷ ಹಾಗೂ ಯುಡಿಎಫ್ ಅನ್ನು ಶನಿವಾರ ಆಗ್ರಹಿಸಿದ್ದಾರೆ.

ಇಲ್ಲಿನ ಮುಕ್ಕಂನಲ್ಲಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಜಂಟಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಭೂಕುಸಿತದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತನ್ನ ಭಾಷಣ ಆರಂಭಿಸಿದರು. ಕುಟುಂಬದ ಸದಸ್ಯರು, ಸೊತ್ತನ್ನು ಕಳೆದುಕೊಂಡ ಹಾಗೂ ದುರಂತದಿಂದ ಸಂತ್ರಸ್ತರಾದ ಜನರೊಂದಿಗೆ ತನ್ನ ಪಕ್ಷ ಹಾಗೂ ಯುಡಿಎಫ್ ಬೆಂಬಲವಾಗಿ ನಿಲ್ಲಬೇಕು ಎಂದರು.

‘‘ದುರಾದೃಷ್ಟವೆಂದರೆ ನಾವು ಸರಕಾರದಲ್ಲಿ ಇಲ್ಲ. ಸರಕಾರಕ್ಕೆ ಏನು ಮಾಡಲು ಸಾಧ್ಯವಿದೆಯೇ ಅದನ್ನು ನಮಗೆ ಮಾಡಲು ಸಾಧ್ಯವಿಲ್ಲ. ಆದುದರಿಂದ ಭೂಕುಸಿತದ ಸಂತ್ರಸ್ತರಿಗೆ ನೆರವು ನೀಡಲು ಕಾಂಗ್ರೆಸ್ ಹಾಗೂ ಯುಡಿಎಫ್‌ನ ಪ್ರತಿಯೋರ್ವ ಸದಸ್ಯ ಕೇರಳ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ನಾನು ನನ್ನ ಸಹೋದರಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರಲ್ಲಿ ವಿನಂತಿಸುತ್ತೇನೆೆ’’ ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಯನಾಡ್ ಜನರ ವಿರುದ್ಧ ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಅವರು ವಯನಾಡ್‌ನ ಜನರಿಗೆ ನೀಡಬೇಕಾದ ನೆರವನ್ನು ನೀಡುತ್ತಿಲ್ಲ ಎಂದರು.

‘‘ಇದು ವಿಷಯವಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಅಮೆರಿಕದಲ್ಲಿ ಅದಾನಿ ವಿರುದ್ಧ ದೋಷಾರೋಪ ಮಾಡಿದರೆ ಹಾಗೂ ಅಲ್ಲಿ ಆತನನ್ನು ಕ್ರಿಮಿನಲ್ ಎಂದು ಕರೆದರೆ, ಭಾರತದಲ್ಲಿ ಮಾತ್ರ ನಾವು ಆತನ ವಿರುದ್ಧ ದೋಷಾರೋಪಣೆ ಮಾಡುವಂತಿಲ್ಲ’’ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

ಇದಕ್ಕಿಂತ ಮುನ್ನ ಇಲ್ಲಿನ ಕರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಪ್ರಿಯಾಂಕಾ ಗಾಂಧಿ, ನನಗೆ ಇಲ್ಲಿಗೆ ಹಿಂದಿರುಗಲು ಸಂತೋಷವಾಗುತ್ತಿದೆ. ನಾನು ಕಾರ್ಯ ನಿರ್ವಹಿಸಲು ಸಿದ್ಧಳಾಗಿದ್ದೇನೆ. ವಯನಾಡ್‌ನ ಜನರ ಉತ್ತಮ ಭವಿಷ್ಯಕ್ಕಾಗಿ ನನಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News