ಎಂಟು ಮಸೂದೆಗಳಿಗೆ ರಾಜ್ಯಪಾಲರ ಅಂಕಿತ ಬಾಕಿ; ಸುಪ್ರೀಂ ಕೋರ್ಟ್ ಕದ ತಟ್ಟಿದ ಕೇರಳ ಸರ್ಕಾರ
ಹೊಸದಿಲ್ಲಿ: ಕೇರಳ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಮಯಕ್ಕೆ ಸರಿಯಾಗಿ ಅನುಮೋದನೆ ನೀಡುವಂತೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಕೇರಳ ವಿಧಾನಸಭೆ ಅಂಗೀಕರಿಸಿದ ಎಂಟು ಮಸೂದೆಗಳಿಗೆ ರಾಜ್ಯಪಾಲರ ಅಂಕಿತ ದೊರೆಯದೇ ಇರುವುದು ಹಾಗೂ ಅವುಗಳಲ್ಲಿ ಮೂರು ಮಸೂದೆಗಳು ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯ ಬಾಕಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿ ಈಗ ಸುಪ್ರೀಂ ಅಂಗಳಕ್ಕೆ ತಲುಪಿದೆ. ಇನ್ನೂ ಮೂರು ಮಸೂದೆಗಳು ಒಂದು ವರ್ಷದಿಂದ ಅಂಕಿತ ದೊರೆಯದೆ ಬಾಕಿಯಾಗಿವೆ.
“ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಮಯ ಮಿತಿಯೊಳಗೆ ಅಂಕಿತ ನೀಡುವುದು ರಾಜ್ಯಪಾಲರ ಕರ್ತವ್ಯ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಜನರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿ ಅವರು ಅಂಕಿತ ನೀಡಬೇಕಿದ್ದರೂ ರಾಜ್ಯಪಾಲರು ತಮ್ಮ ಸಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾಗಿದ್ದಾರೆ,” ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಬಾಕಿಯಾಗಿರುವ ಮಸೂದೆಗಳಲ್ಲಿ ಒಂದು ರಾಜ್ಯಪಾಲರನ್ನು ರಾಜ್ಯ ಸರ್ಕಾರದ ವಿವಿಗಳ ಕುಲಪತಿ ಹುದ್ದೆಯಿಂದ ತೆಗೆದುಹಾಕುವುದಕ್ಕೆ ಸಂಬಂಧಿಸಿದ್ದಾಗಿದೆ. ರಾಜ್ಯ ಸರ್ಕಾರವು ಆಡಳಿತ ಪಕ್ಷದ ನಾಯಕರ ಕುಟುಂಬ ಸದಸ್ಯರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸುತ್ತಿದೆ ಎಂದು ಇದಕ್ಕೂ ಮುನ್ನ ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧ ಆರೋಪ ಹೊರಿಸಿದ್ದರು.
ಮುಖ್ಯಮಂತ್ರಿ ತಮ್ಮ ಸಂವಿಧಾನಿಕ ಕರ್ತವ್ಯ ನಿರ್ವಹಿಸುತ್ತಿಲ್ಲ, ರಾಜ ಭವನಕ್ಕೆ ಬರುತ್ತಿಲ್ಲ, ಬದಲು ಕ್ಯಾಬಿನೆಟ್ ಸಚಿವರು ಮತ್ತು ಅಧಿಕಾರಿಗಳನ್ನು ಕಳುಹಿಸಿ ಅವರು ಮಾಹಿತಿ ನೀಡುವಂತೆ ಮಾಡುತ್ತಾರೆ ಎಂದು ತೀರಾ ಇತ್ತೀಚೆಗೆ ರಾಜ್ಯಪಾಲರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆರೋಪ ಹೊರಿಸಿದ್ದರು.