ಚಿತ್ರರಂಗದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ | ತನಿಖೆಗೆ ಕೇರಳ ಸರಕಾರದಿಂದ ಪೊಲೀಸ್ ತಂಡ ರಚನೆ

Update: 2024-08-25 16:23 GMT

PC : indianexpress.com

ತಿರುವನಂತಪುರ : ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆದಿದೆ ಯೆನ್ನಲಾದ ಲೈಂಗಿಕ ಕಿರುಕುಳದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಕೇರಳ ಸರಕಾರವು ರವಿವಾರ ವಿಶೇಷ ತಂಡವೊಂದನ್ನು ರಚಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರವಿವಾರ ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ನಡೆಸಿದ ಬಳಿಕ ಕೇರಳ ಸರಕಾರ ಏಳು ಸದಸ್ಯರ ತಂಡವನ್ನು ರಚಿಸಿದೆ.

ಪೊಲೀಸ್ ಮಹಾನಿರೀಕ್ಷಕ ಸ್ಪರ್ಜನ್ ಕುಮಾರ್ ಅವರು ವಿಶೇಷ ತಂಡದ ನೇತೃತ್ವ ವಹಿಸಲಿದ್ದು, ಹಾಗೂ ರಾಜ್ಯದ ನಾಲ್ವರು ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಗಳು ತಂಡದಲ್ಲಿರುವರು.

ಕ್ರೈಂ ಬ್ರಾಂಚ್ ಎಡಿಜಿಪಿ ಎಚ್.ವೆಂಕಟೇಶ್ ಅವರು ತಂಡದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆಂದು ಮುಖ್ಯಮಂತ್ರಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಜನ್ ಕುಮಾರ್ ಅವರಲ್ಲದೆ ಡಿಐಜಿ ಎಸ್.ಅಜೀತಾ ಬೇಗಂ, ಕ್ರೈಂ ಬ್ರಾಂಚ್ ಮುಖ್ಯ ಕಾರ್ಯಾಲಯದ ಎಸ್ಪಿ ಮೇರಿನ್ ಜೋಸೆಫ್, ಕರಾವಳಿ ಪೊಲೀಸ್ ಎಐಜಿ ಪೂಂಗುಳಲಿ, ಕೇರಳ ಪೊಲೀಸ ಅಕಾಡೆಮಿ ಸಹಾಯಕ ನಿರ್ದೇಶಕಿ ಐಶ್ವರ್ಯಾ ಡೋಂಗ್ರೆ, ಎಐಜಿ ಅಜಿತ್ ವಿ ಹಾಗೂ ಕ್ರೈಂ ಬ್ರಾಂಚ್ ಎಸ್ಪಿ ಎಸ್. ಮಧುಸೂದನ್ ತಂಡದಲ್ಲಿದ್ದಾರೆ

ಚಿತ್ರನಟಿಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಆರೋಪಗಳ ತನಿಖೆಗಾಗಿ 2017ರಲ್ಲಿ ರಚನೆಯಾದ ನ್ಯಾಯಮೂರ್ತಿ ಹೇಮಾ ಸಮಿತಿಯು ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಶೋಷಣೆ ಹಾಗೂ ಕಿರುಕುಳದ ಪ್ರಕರಣಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂಬ ಬಲವಾದ ಬೇಡಿಕೆಗಳು ಕೇಳಿಬರುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News