ಕೇರಳ | ಸಿಎಂ ಪಿಣರಾಯಿ ವಿಜಯನ್ ಪುತ್ರಿಯ ಸಂಸ್ಥೆಯ ವಿರುದ್ಧ ತನಿಖೆಗೆ ಕೋರಿದ್ದ ಬಿಜೆಪಿ ನಾಯಕನ ಅರ್ಜಿ ಮುಕ್ತಾಯಗೊಳಿಸಿದ ಹೈಕೋರ್ಟ್
ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ ಅವರ ಸಂಸ್ಥೆಯ ವಿರುದ್ಧ ಕಂಪನಿಗಳ ಕಾಯ್ದೆ ಅಡಿ ತನಿಖೆ ನಡೆಸಬೇಕು ಹಾಗೂ ಗಂಭೀರ ವಂಚನೆ ತನಿಖಾ ಕಚೇರಿಯಿಂದ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಬಿಜೆಪಿ ನಾಯಕ ಶೋನ್ ಜಾರ್ಜ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಕೇರಳ ಹೈಕೋರ್ಟ್ ಮುಕ್ತಾಯಗೊಳಿಸಿದೆ.
ಪಿಣರಾಯಿ ವಿಜಯನ್ ಅವರ ಪುತ್ರಿಯ ಸದ್ಯ ನಿಷ್ಕ್ರಿಯವಾಗಿರುವ ಸಂಸ್ಥೆಯಾದ ಎಕ್ಸಾಲಾಜಿಕ್, ಅಬುಧಾಬಿಯ ಖಾತೆಯಲ್ಲಿ ಬೃಹತ್ ಮೊತ್ತದ ಹಣವನ್ನು ಠೇವಣಿ ಇರಿಸಿದೆ ಹಾಗೂ ಕೆನಡಾ ಕಂಪನಿ ಎಸ್ಎನ್ಸಿ ಲವಾಲಿನ್ ಮೂಲಕ ಅಮೆರಿಕಕ್ಕೆ ನಿಧಿಯನ್ನು ವರ್ಗಾಯಿಸಿದೆ ಎಂದು ಆರೋಪಿಸಿ ಶೋನ್ ಜಾರ್ಜ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಲೇವಾರಿ ಮಾಡಿದ ಕೇರಳ ಹೈಕೋರ್ಟ್, ಅವರ ಅರ್ಜಿ ಮುಕ್ತಾಯಗೊಳಿಸಿತು.
ಕಳೆದ ವರ್ಷ ಮಲಯಾಳಂ ದಿನಪತ್ರಿಕೆಯೊಂದು, ಮುಖ್ಯಮಂತ್ರಿಗಳ ಪುತ್ರಿಗೆ 2017ರಿಂದ 2020ರವರೆಗೆ ಕೊಚ್ಚಿ ಮೂಲದ ಗಣಿಗಾರಿಕೆ ಕಂಪನಿಯಾದ ಸಿಎಂಆರ್ಎಲ್ ಒಟ್ಟು ರೂ. 1.72 ಕೋಟಿ ಮೊತ್ತವನ್ನು ಪಾವತಿಸಿದೆ ಎಂದು ವರದಿ ಮಾಡಿದ್ದರಿಂದ ಈ ಕುರಿತು ವಿವಾದ ಭುಗೆಲೆದ್ದಿತ್ತು. ಇದರ ಬೆನ್ನಿಗೇ ಬಿಜೆಪಿ ನಾಯಕ ಶೋನ್ ಜಾರ್ಜ್, ವೀಣಾರ ಎಕ್ಸಾಲಾಜಿಕ್ ಸಂಸ್ಥೆಯ ವಿರುದ್ಧ ಗಂಭೀರ ವಂಚನೆ ತನಿಖಾ ಕಚೇರಿಯಿಂದ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ನಡುವೆ, ಹೈಕೋರ್ಟ್ ಶೋನ್ ಜಾರ್ಜ್ ರ ಅರ್ಜಿಯನ್ನು ವಜಾ ಮಾಡಿದ ಬೆನ್ನಿಗೇ ಶೋನ್ ಜಾರ್ಜ್ ಹಾಗೂ ಕೇರಳದ ಮಾಜಿ ಹಣಕಾಸು ಸಚಿವ ಐಸಾಕ್ ನಡುವೆ ವಾಕ್ಸಮರ ನಡೆದಿದೆ.