ಹಾದಿಯಾ ಪ್ರಕರಣ: ತಂದೆಯ ಹೇಬಿಯಸ್ ಕಾರ್ಪಸ್ ಅರ್ಜಿ ವಿಲೇವಾರಿ ಮಾಡಿದ ಕೇರಳ ಹೈಕೋರ್ಟ್
ತಿರುವನಂತಪುರಂ: ಕೇರಳದಲ್ಲಿ 2016ರಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ ಹಾದಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೇರಳ ಹೈಕೋರ್ಟ್ ಇಂದು ವಿಲೇವಾರಿ ಮಾಡಿದೆ. ಹಾದಿಯಾ ಇಸ್ಲಾಂ ಧರ್ಮ ಸ್ವೀಕರಿಸಿ ಮುಸ್ಲಿಂ ಯುವಕನೊಬ್ಬನೊಂದಿಗೆ ಮದುವೆಯಾದ ಘಟನೆ ದೇಶವ್ಯಾಪಿ ಸುದ್ದಿಯಾಗಿತ್ತು.
ಹಾದಿಯಾ ಅವರ ಮೊದಲ ಮದುವೆ ಈಗ ಮುಗಿದ ಅಧ್ಯಾಯ ಹಾಗೂ ಈಗ ಆಕೆ ಎರಡನೇ ಮದುವೆಯಾಗಿ ತನ್ನ ಎರಡನೇ ಪತಿಯೊಂದಿಗೆ ತಿರುವನಂತಪುರಂನಲ್ಲಿದ್ದಾಳೆಂದು ಕೋರ್ಟಿಗೆ ಮಾಹಿತಿ ನೀಡಿದ ನಂತರ ಹಾದಿಯಾಳ ತಂದೆ ಅಶೋಕನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಸಿ ಪ್ರತೀಪ್ ಕುಮಾರ್ ವಿಲೇವಾರಿ ಮಾಡಿದರು.
ಹಾದಿಯಾ ಬೇರೊಬ್ಬ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಆತನ ಜೊತೆಗಿದ್ದಾಳೆಂದು ಪ್ರಾಸಿಕ್ಯೂಶನ್ ವರದಿ ಸಲ್ಲಿಕೆಯಾದ ನಂತರ ಕೋರ್ಟಿನ ನಿರ್ಧಾರ ಹೊರಬಿದ್ದಿದೆ. ಹಾದಿಯಾ ಕಾನೂನುಬಾಹಿರ ದಿಗ್ಬಂಧನದಲ್ಲಿಲ್ಲ ಎಂದು ಮನವರಿಕೆಯಾದ ನಂತರ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡಿದರು.
ತಮ್ಮ ಮಗಳನ್ನು ಅಕ್ರಮವಾಗಿ ಕೂಡಿಹಾಕಿದ್ದಾರೆಂದು ಕಳವಳ ವ್ಯಕ್ತಪಡಿಸಿ ಆಕೆಯನ್ನು ನ್ಯಾಯಾಲಯದೆದುರು ಹಾಜರುಪಡಿಸಬೇಕೆಂದು ಕೋರಿ ಅಶೋಕನ್ ಈ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.