ಕೇಸರಿ ಧ್ವಜವನ್ನು ರಾಜಕಾರಣಕ್ಕೆ ಬಳಸಲು ಸಾಧ್ಯವಿಲ್ಲ ಎಂದ ಕೇರಳ ಹೈಕೋರ್ಟ್

Update: 2023-09-14 17:55 GMT

ಕೇರಳ ಹೈಕೋರ್ಟ್ | Photo: PTI 

ತಿರುವನಂತಪುರಂ: ಆಲಪ್ಪುಝದ ಗ್ರಾಮವೊಂದರಲ್ಲಿನ ದೇವಾಲಯದ ಆವರಣದಲ್ಲಿ ಕೇಸರಿ ಧ್ವಜವನ್ನು ಹಾರಿಸಲು ಅನುಮತಿ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ ಎಂದು LiveLaw ಸುದ್ದಿ ಸಂಸ್ಥೆ ವರದಿ ಮಾಡಿದೆ.

"ದೇವಾಲಯಗಳು ಅಧ್ಯಾತ್ಮಿಕ ಅನುಭೂತಿ ಹಾಗೂ ಶಾಂತಿಯ ತಾಣಗಳಾಗಿವೆ. ಅವುಗಳ ಪಾವಿತ್ರ್ಯತೆ ಹಾಗೂ ಗೌರವ ಅತ್ಯಂತ ಮುಖ್ಯವಾಗಿದೆ" ಎಂದು ಸೆಪ್ಟೆಂಬರ್ 5ರಂದು ಏಕಸದಸ್ಯ ನ್ಯಾಯಪೀಠದ ನ್ಯಾಯಾಧೀಶ ರಾಜಾ ವಿಜಯರಾಘವನ್ ವಿ. ಅಭಿಪ್ರಾಯಪಟ್ಟಿದ್ದಾರೆ. ಇಂತಹ ಪವಿತ್ರ ಆಧ್ಯಾತ್ಮಿಕ ತಾಣಗಳಿಗೆ ರಾಜಕೀಯ ದುರುದ್ದೇಶ ಅಥವಾ ಏಕಶಕ್ತಿ ವಶಕ್ಕೆ ಒಪ್ಪಿಸುವ ಪ್ರಯತ್ನಗಳಿಂದ ಕುಂದುಂಟು ಮಾಡಬಾರದು ಎಂದು ಅವರು ಹೇಳಿದ್ದಾರೆ.

ತಾವು ಆಲಪ್ಪುಝ ಜಿಲ್ಲೆಯ ಭರಣಿಕಾವು ಗ್ರಾಮದಲ್ಲಿರುವ ಮುತ್ತುಪಿಲಕ್ಕಾಡು ಶ್ರೀ ಪಾರ್ಥಸಾರಥಿ ದೇವಾಲಯದ ಪಾರ್ಥಸಾರಥಿ ದೈವದ ಆರಾಧಕರಾಗಿದ್ದೇವೆ ಎಂದು ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿತ್ತು.

ತಮ್ಮ ಅರ್ಜಿಯಲ್ಲಿ, ವಿಶೇಷ ಸಮಾರಂಭಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಕೇಸರಿ ಧ್ವಜವನ್ನು ಪ್ರತಿಷ್ಠಾಪಿಸುವ ತಮ್ಮ ಪ್ರಯತ್ನಗಳನ್ನು ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳು ವಿಫಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು, ಅದಕ್ಕಾಗಿ ನ್ಯಾಯಾಲಯದಿಂದ ಪೊಲೀಸ್ ರಕ್ಷಣೆ ಕೋರಿದ್ದರು.

ಅದಕ್ಕೆ ಪ್ರತಿಯಾಗಿ, ಅರ್ಜಿದಾರರು ದೇವಾಲಯದ ಸಂಪ್ರದಾಯಗಳನ್ನು ಆಚರಿಸುವ ಯಾವುದೇ ನೈಜ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿರುವ ಹೈಕೋರ್ಟ್, "ಇದಲ್ಲದೆ, ಅವರು ದೇವಾಲಯದ ಒಳಗೆ ಅಥವಾ ಸುತ್ತಮುತ್ತ ಯಾವುದೇ ಧ್ವಜ ಹಾರಿಸಲು ಅಥವಾ ತೋರಣ ಕಟ್ಟಲು ಈ ನ್ಯಾಯಾಲಯದ ಆದೇಶ ಹಾಗೂ ಆಡಳಿತಾತ್ಮಕ ಸಮಿತಿಯ ನಿರ್ಣಯದ ಅನುಸಾರ ನಿರಾಕರಿಸಲಾಗಿದೆ" ಎಂದು ತನ್ನ ಆದೇಶದಲ್ಲಿ ಹೇಳಿದೆ. "ಅರ್ಜಿದಾರರ ಕ್ರಮಗಳು ಹಾಗೂ ಉದ್ದೇಶಗಳು ದೇವಾಲಯದಲ್ಲಿ ಕಾಯ್ದುಕೊಳ್ಳಬೇಕಾದ ಶಾಂತ ಸ್ಥಿತಿ ಹಾಗೂ ಪವಿತ್ರ ವಾತಾವರಣಕ್ಕೆ ಧಕ್ಕೆಯನ್ನುಂಟು ಮಾಡುವಂತಿವೆ" ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News