ಮೋದಿ ಸಂಪುಟದ ಸೇರಿದ ಎಚ್.ಡಿ.ಕುಮಾರಸ್ವಾಮಿ: ಹೊಸ ಪಕ್ಷ ಸ್ಥಾಪನೆಗೆ ಕೇರಳ ಜೆಡಿಎಸ್‍ ನಿರ್ಧಾರ

Update: 2024-06-19 07:39 GMT

ಕೇರಳ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂ ಟಿ.ಥಾಮಸ್ (Photo: deccanchronicle.com)

ತಿರುವನಂತಪುರ: ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ, ಜಾತ್ಯತೀತ ಜನತಾದಳದ ಕೇರಳ ಘಟಕ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್‍ನಿಂದ ಬೇರ್ಪಟ್ಟು, ಹೊಸ ರಾಜಕೀಯ ಪಕ್ಷವಾಗಿ ರೂಪುಗೊಳ್ಳಲು ನಿರ್ಧರಿಸಿದೆ.

ಮಾತೃಪಕ್ಷದಿಂದ ಸಂಬಂಧ ಕಡಿದುಕೊಂಡು, ಹೊಸ ಹೆಸರಿನೊಂದಿಗೆ ಹೊಸ ಪಕ್ಷವಾಗಿ ಉದಯಿಸಲು ಮಂಗಳವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಯವರು ನರೇಂದ್ರ ಮೋದಿ ಸಂಪುಟದಲ್ಲಿ ಸೇರ್ಪಡೆಗೊಂಡ ತಕ್ಷಣ, ಮಾತೃಪಕ್ಷದಿಂದ ಬೇರ್ಪಡುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಆಡಳಿತಾರೂಢ ಎಲ್‍ಡಿಎಫ್‍ನ ಪ್ರಮುಖ ಘಟಕ ಪಕ್ಷವಾದ ಸಿಪಿಎಂ ಗಡುವು ನೀಡಿತ್ತು. ಮೋದಿ ಸಂಪುಟಕ್ಕೆ ಕುಮಾರಸ್ವಾಮಿ ಸೇರ್ಪಡೆ ಬಳಿಕ ಎಲ್‍ಡಿಎಫ್‍ನಲ್ಲಿ ಜೆಡಿಎಸ್‍ನ ಕೇರಳ ಘಟಕವನ್ನು ಮುಂದುವರಿಸುವುದು ಅಸಮರ್ಥನೀಯ ಎನಿಸಿತ್ತು.

ಹೊಸ ಹೆಸರಿನಲ್ಲಿ ಹೊಸ ಪಕ್ಷವನ್ನು ನೋಂದಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹೊಸ ಪಕ್ಷದ ಹೆಸರು ಮತ್ತು ಸಂರಚನೆ ಬಗ್ಗೆ ತಜ್ಞರ ಮಾಹಿತಿ ಪಡೆದು ಎಲ್ಲ ಕಾನೂನಾತ್ಮಕ ತೊಡಕುಗಳನ್ನು ಪರಿಹರಿಸಿಕೊಂಡು ನಿರ್ಧರಿಸಲಾಗುವುದು ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂ ಟಿ.ಥಾಮಸ್ ಸ್ಪಷ್ಟಪಡಿಸಿದರು.

"ನಾವು ಎಲ್‍ಡಿಎಫ್‍ನಂತೆ ಬಿಜೆಪಿಯೇತರ ಪಕ್ಷವಾಗಿ ಮತ್ತು ಕಾಂಗ್ರೆಸ್ಸೇತರ ಪಕ್ಷವಾಗಿ ಗುರುತಿಸಿಕೊಳ್ಳಲು ಬಯಸುತ್ತೇವೆ" ಎಂದು ಸ್ಪಷ್ಟಪಡಿಸಿದ ಅವರು, ದೇವೇಗೌಡ ನೇತೃತ್ವದ ಪಕ್ಷದ ಜತೆ ಯಾವುದೇ ಸಂಬಂಧ ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News