ಕೇರಳ ಭೂಕುಸಿತ | ರಕ್ಷಣಾ ಕಾರ್ಯಾಚರಣೆಯಿಂದ ಭಾಗಶಃ ಮರಳಿದ ಸೇನೆ

Update: 2024-08-08 15:12 GMT

                                                                                                                          PC : PTI 

ಹೊಸದಿಲ್ಲಿ: ನೂರಾರು ಜನರ ಸಾವಿಗೆ ಕಾರಣವಾದ ವಯನಾಡ್‌ನ ಭೂಕುಸಿತದ ಸ್ಥಳದಲ್ಲಿ ಕಳೆದ 9 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಸೇನೆ ಗುರುವಾರ ಭಾಗಶಃ ಹಿಂದಿರುಗಿದೆ.

ಕಾರ್ಯಾಚರಣೆ ಮುಗಿಸಿ ಭಾಗಶಃ ಮರಳುವ ಸೇನೆಯ ನಿರ್ಧಾರವನ್ನು ಕೇರಳ ಲೋಕೋಪಯೋಗಿ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ತಿಳಿಸಿದರು. ಸೇನೆ ತನ್ನ ಕಾರ್ಯಾಚರಣೆ ಮುಗಿಸಿದೆ. ಸೇನೆಗೆ ನಮ್ಮ ಕೃತಜ್ಞತೆಗಳು ಎಂದು ಅವರು ಹೇಳಿದರು.

ಸೇನೆ 190 ಅಡಿ ಉದ್ದದ ಸೇತುವೆಯನ್ನು ದಾಖಲಾರ್ಹ ಸಮಯದಲ್ಲಿ ನಿರ್ಮಾಣ ಮಾಡಿದೆ. ಆ ಮೂಲಕ ಭೂಕುಸಿತದಿಂದ ಧ್ವಂಸವಾಗಿರುವ ಹಾಗೂ ಸಂಪೂರ್ಣ ಪ್ರತ್ಯೇಕಗೊಂಡಿರುವ ಮುಂಡಕ್ಕೈ ಹಾಗೂ ಚೂರಲ್‌ಮಲ ಪ್ರದೇಶದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಿಯಾಸ್ ತಿಳಿಸಿದರು.

ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಿರುವುದರಿಂದ ಅವರು ಈಗ ನಿರ್ಗಮಿಸುತ್ತಿರುವುದನ್ನು ನೋಡುವಾಗ ನೋವಾಗುತ್ತದೆ. ಈ ಎಲ್ಲಾ ದಿನಗಳಲ್ಲಿ ಎಲ್ಲರೂ ಒಂದೇ ದೇಹ ಹಾಗೂ ಒಂದೇ ಯೋಚನೆಯಂತೆ ಕಾರ್ಯ ನಿರ್ವಹಿಸಿದೆವು ಎಂದು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಚಿವರು ತಿಳಿಸಿದರು.

ಸಂಕಷ್ಟದ ಸಮಯದಲ್ಲಿ ಅವರು ಇಲ್ಲಿಗೆ ಆಗಮಿಸಿದ್ದಾರೆ. ಅವರನ್ನು ಬೀಳ್ಕೊಡಲು ಭಾವನಾತ್ಮಕವಾಗಿ ಸಾಧ್ಯವಾಗುತ್ತಿಲ್ಲ. ಆದರೆ, ಅವರು ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಇತರ ಹಲವು ಜವಾಬ್ದಾರಿಗಳು ಕೂಡ ಇವೆ. ಅದು ನನಗೆ ಗೊತ್ತಿದೆ. ಆದುದರಿಂದ ಅವರ ಸೇವೆಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸೇನಾಧಿಕಾರಿಗಳಿಗೆ ಸ್ಮರಣಿಕೆ ನೀಡಿದ ಬಳಿಕ ರಿಯಾಸ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News