ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟ ವಿರೋಧಿಸಲು ಮುಂದಾದ ಕೇರಳ ಹಾಲು ಉತ್ಪಾದಕರ ಒಕ್ಕೂಟ
ತಿರುವನಂತಪುರಂ: ಕೇರಳದಲ್ಲಿ ಕರ್ನಾಟಕ ಹಾಲು ಒಕ್ಕೂಟದ ಹಾಲು ಉತ್ಪನ್ನಗಳ ಮಾರಾಟವನ್ನು ವಿರೋಧಿಸಲು ಕೇರಳ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟ (ಮಿಲ್ಮಾ) ಸಜ್ಜಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಿಲ್ಮಾದ ಮಲಬಾರ್ ಪ್ರಾಂತ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ, "ಈ ವಿಷಯದ ಕುರಿತು ಭಾರತೀಯ ರಾಷ್ಟ್ರೀಯ ಸಹಕಾರ ಹೈನ್ಯೋದ್ಯಮ ಒಕ್ಕೂಟದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು" ಎಂದು ಹೇಳಿದ್ದಾರೆ.
"ಹಾಲು ಒಕ್ಕೂಟಗಳು ದೀರ್ಘಕಾಲದಿಂದ ದೇಶದಲ್ಲಿ ಅನುಸರಿಸುತ್ತಾ ಬರುತ್ತಿರುವ ಕೆಲವು ರೂಢಿ ಹಾಗೂ ಅಭ್ಯಾಸಗಳನ್ನು ಮುರಿಯುವುದು ನೈತಿಕವಾಗಿ ತಪ್ಪು. ಕೇರಳದಲ್ಲಿ ತನ್ನ ಮಾರಾಟ ಮಳಿಗೆಗಳನ್ನು ತೆರೆಯುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ನಿರ್ಧಾರದ ವಿರುದ್ಧ ನಾನೊಂದು ಪತ್ರ ಬರೆದಿದ್ದೆ. ಆದರೆ, ಅವರು ಅದನ್ನು ನಿರ್ಲಕ್ಷಿಸಿದ್ದರು" ಎಂದು ಕೆ.ಎಸ್.ಮಣಿ India Today ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ನಂದಿನಿ-ಅಮುಲ್ ವಿಲೀನ ಪ್ರಕರಣಕ್ಕೂ ಮುಂಚೆಯೇ ಕೇರಳದಲ್ಲಿ ವ್ಯವಹಾರ ನಡೆಸಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರು ನಿರ್ಣಯಿಸಿದ್ದರು. ಕರ್ನಾಟಕದಲ್ಲಿ ವ್ಯವಹಾರ ಪ್ರಾರಂಭಿಸುವ ಅಮೂಲ್ ನಿರ್ಧಾರ ತಪ್ಪಾಗಿತ್ತು. ಆದರೆ, ಅದನ್ನು ವಿರೋಧಿಸುವ ಯಾವುದೇ ನೈತಿಕ ಹಕ್ಕು ನಂದಿನಿಗೆ ಇರಲಿಲ್ಲ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
"ಹಾಲು ಒಕ್ಕೂಟಗಳು ಕೇವಲ ವ್ಯಾವಹಾರಿಕ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡಬಾರದು. ಬದಲಿಗೆ ತಮ್ಮ ರಾಜ್ಯಗಳಲ್ಲಿನ ಹೈನ್ಯೋದ್ಯಮ ರೈತರ ಕಲ್ಯಾಣಕ್ಕಾಗಿಯೂ ಕೆಲಸ ಮಾಡಬೇಕು" ಎಂದೂ ಮಣಿ ಹೇಳಿದ್ದಾರೆ.
"ಒಂದು ರಾಜ್ಯದ ಸಹಕಾರ ಸಂಸ್ಥೆ ಮತ್ತೊಂದು ರಾಜ್ಯದ ಸಹಕಾರ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರ ತತ್ವ ಹಾಗೂ ಮೂಲಭೂತ ಮೌಲ್ಯಗಳಿಗೆ ವಿರುದ್ಧ" ಎಂಬುದರತ್ತಲೂ ಅವರು ಬೊಟ್ಟು ಮಾಡಿದ್ದಾರೆ.
"ಹಬ್ಬದ ಋತುಗಳು ಹಾಗೂ ಕೇರಳದಲ್ಲಿ ಹಾಲಿನ ಕೊರತೆ ಇರುವ ಸಂದರ್ಭಗಳಲ್ಲಿ ಮಿಲ್ಮಾ ಮುಖ್ಯವಾಗಿ ಕರ್ನಾಟಕದ ನಂದಿನಿ ಹಾಗೂ ತಮಿಳುನಾಡಿನ ಆವಿನ್ ಅನ್ನೇ ಅವಲಂಬಿಸಿದೆ. ಹೀಗಾಗಿ ನಂದಿನಿಯ ಉತ್ತಮ ಗ್ರಾಹಕನಾಗಿರುವ ಮಿಲ್ಮಾ ಅದರ ಕೆಲವೇ ಲೀಟರ್ ಹಾಲು ಮಾರಾಟದಿಂದ ಚಂತಿತವಾಗಿದೆ ಎಂದು ಬಿಂಬಿಸುವುದು ಸರಿಯಲ್ಲ" ಎಂದು ಮಣಿ ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟದಿಂದ ಮಿಲ್ಮಾಗೆ ಯಾವುದೇ ಸಮಸ್ಯೆ ಇಲ್ಲ ಎಂತಲೂ ಅವರು ಹೇಳಿದ್ದಾರೆ.
"ಕಳೆದ ಆರು ತಿಂಗಳ ಅಂಕಿ-ಅಂಶಗಳ ಪ್ರಕಾರ, ನಮ್ಮ ಉತ್ಪನ್ನಗಳ ಮಾರಾಟದಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಆದರೆ, ನಂದಿನಿಯ ಪ್ರವೇಶದಿಂದ ಕೇರಳ ಮಾರುಕಟ್ಟೆಯಲ್ಲಿನ ಇತರ ಸಂಸ್ಥೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ" ಎಂದು ಅವರು ತಿಳಿಸಿದ್ದಾರೆ.
"ದೇಶದಲ್ಲಿನ ಹಾಲು ಒಕ್ಕೂಟಗಳ ಮಾತೃ ಸಂಸ್ಥೆಯಾದ ಅಮುಲ್, ಇತರ ರಾಜ್ಯಗಳ ಹಾಲು ಒಕ್ಕೂಟಗಳು ಹಾಗೂ ಹೈನ್ಯೋದ್ಯಮ ರೈತರಿಗೆ ತೊಂದರೆಯಾಗುವಂತೆ ವ್ಯವಹರಿಸುವುದು ಸೂಕ್ತವಲ್ಲ. ಈ ವಿಷಯವನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲು ಮಿಲ್ಮಾ ಪ್ರಯತ್ನಿಸುತ್ತಿದೆಯೇ ಹೊರತು ಈ ಸಂಬಂಧ ಯಾವುದೇ ಕಾನೂನು ಕ್ರಮದ ಮೊರೆ ಹೋಗುವ ಯೋಜನೆ ಹೊಂದಿಲ್ಲ" ಎಂದೂ ಮಣಿ ಹೇಳಿದ್ದಾರೆ.
ನಂದಿನಿಯು ಮಲಪ್ಪುರಂ ಜಿಲ್ಲೆಯ ಮಂಚೇರಿ ಮತ್ತು ತಿರೂರ್, ಎರ್ನಾಕುಲಂ ಜಿಲ್ಲೆಯ ಕೊಚ್ಚಿ ಹಾಗೂ ಪಟ್ಟಣಂತಿಟ್ಟ ಜಿಲ್ಲೆಯ ಪಂದಲಮ್‌ನಲ್ಲಿ ತನ್ನ ಮಾರಾಟ ಮಳಿಗೆಗಳನ್ನು ತೆರೆದಿದೆ.