ಕೇರಳ | ವಿಐಪಿ ಗ್ಯಾಲರಿಯಿಂದ 20 ಅಡಿ ಕೆಳಗೆ ಬಿದ್ದ ಶಾಸಕಿ ಉಮಾ ಥಾಮಸ್ ಸ್ಥಿತಿ ಗಂಭೀರ
ಕೇರಳ : ರವಿವಾರ ಸಂಜೆ ಜವಾಹರಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣದ ವಿಐಪಿ ಗ್ಯಾಲರಿಯಿಂದ 20 ಅಡಿ ಕೆಳಗೆ ಬಿದ್ದು ಕೇರಳದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಘಟನೆಯಲ್ಲಿ ಉಮಾ ಥಾಮಸ್ ಅವರ ಮೆದುಳು, ಶ್ವಾಸಕೋಶಗಳು ಮತ್ತು ಬೆನ್ನುಮೂಳೆಗೆ ತೀವ್ರವಾದ ಗಾಯಗಳಾಗಿದೆ.
ಕೊಚ್ಚಿಯ ರೆನೈ ಮೆಡಿಸಿಟಿಯ ಡಾ.ಕೃಷ್ಣನ್ ಉನ್ನಿ ಪೋಲಾಕುಳತ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಉಮಾ ಥಾಮಸ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು, ಅವರ ಪಕ್ಕೆಲುಬುಗಳು ಮುರಿದುಹೋದ ಕಾರಣ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದೆ. ಅವರ ಮೆದುಳು ಮತ್ತು ಶ್ವಾಸಕೋಶಕ್ಕೆ ಗಾಯಗಳಾದ ಕಾರಣ ಮುಂದಿನ 24 ಗಂಟೆಗಳು ನಿರ್ಣಾಯಕವಾಗಿವೆ ಎಂದು ಹೇಳಿದ್ದಾರೆ.
ಕಲೂರ್ ಕ್ರೀಡಾಂಗಣದಲ್ಲಿ ನಟಿ ದಿವ್ಯಾ ಉನ್ನಿ ನೇತೃತ್ವದ 12,000 ನೃತ್ಯಗಾರರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಸಾಜಿ ಚೆರಿಯನ್ ಮತ್ತು ಕೊಚ್ಚಿ ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಉಪಸ್ಥಿತರಿದ್ದರು. ತೃಕ್ಕಾಕರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಥಾಮಸ್ ಅವರು ಘಟನೆ ಬಳಿಕ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ಉಮಾ ಥಾಮಸ್ ಅವರು ಕೆಳಗೆ ಬಿದ್ದಾಗ ಅವರ ಮೇಲೆ ಪೈಪ್ ಕೂಡ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.