ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ: ನಟ, ಬಿಜೆಪಿ ಮುಖಂಡ ಸುರೇಶ್‌ ಗೋಪಿ ಅವರಿಗೆ ಸಮನ್ಸ್ ಜಾರಿಗೊಳಿಸಿದ ಪೊಲೀಸರು

Update: 2023-11-13 14:41 GMT

Photo : instagram/sureshgopi

ಕೋಝಿಕ್ಕೋಡ್: ಮಹಿಳಾ ಪತ್ರಕರ್ತರೊಬ್ಬರು ನೀಡಿರುವ ದೂರನ್ನು ಆಧರಿಸಿ, ಕೋಝಿಕ್ಕೋಡ್ ನಲ್ಲಿರುವ ನಡಕ್ಕವು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಮಲಯಾಳಂ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿ ಅವರಿಗೆ ರವಿವಾರ ಕೇರಳ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಮಾಧ‍್ಯಮ ಸಂವಾದವೊಂದರಲ್ಲಿ ಮಹಿಳಾ ಪತ್ರಕರ್ತರೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪದಲ್ಲಿ ಸುರೇಶ್ ಗೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ವಿಚಾರಣೆಗೆ ಬುಧವಾರ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು IANS ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಕ್ಟೋಬರ್ 27ರಂದು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಿಳಾ ವರದಿಗಾರ್ತಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆಂಬ ಆರೋಪಿಸಲಾಗಿತ್ತು. ಘಟನೆಯ ವಿಡಿಯೋ ವೈರಲ್ ಆಗಿತ್ತು.

ನಟ ಮತ್ತು ರಾಜಕಾರಣಿ ಸುರೇಶ್ ಗೋಪಿ 2019ರಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಈ ಬಾರಿಯೂ ಅವರನ್ನು ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಇಷ್ಟು ವರ್ಷಗಳ ಕಾಲ ಬಿಜೆಪಿಯು ಕೇರಳದಲ್ಲಿ ಒಂದು ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ವಿಫಲವಾಗಿರುವ ಕುರಿತು ಅವರನ್ನು ಆ ಮಹಿಳಾ ಪತ್ರಕರ್ತೆಯು ಪ್ರಶ್ನಿಸಿದ್ದರು.

ಈ ಘಟನೆಯ ಬಳಿಕ ನಟನ ವಿರುದ್ಧ ಪ್ರತಿಭಟಿಸಿದ್ದ ಪತ್ರಕರ್ತರು, ಕ್ಷಮೆಯಾಚಿಸಲು ಆಗ್ರಹಿಸಿದ್ದರು. ಸುರೇಶ್ ಗೋಪಿಯವರ ವರ್ತನೆಯನ್ನು ಕೇರಳ ಕಾರ್ಯನಿರತ ಪತ್ರಕರ್ತರ ಸಂಘವೂ ಖಂಡಿಸಿ, ಕ್ಷಮಾಪಣೆ ಬಿಡುಗಡೆ ಮಾಡುವಂತೆ ಅವರನ್ನು ಆಗ್ರಹಿಸಿತ್ತು. ನಂತರ ಈ ಕುರಿತು ಪೋಸ್ಟ್ ಮಾಡಿದ್ದ ಸುರೇಶ್ ಗೋಪಿ, ನನ್ನ ವರ್ತನೆಯಿಂದ ಆ ಮಹಿಳಾ ಪತ್ರಕರ್ತೆಗೇನಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News