ದಿಲ್ಲಿಯಲ್ಲಿ ರೈತರ ‘ಮಹಾಪಂಚಾಯತ್’
ಹೊಸದಿಲ್ಲಿ : ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಸ್ವೀಕರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನೇತೃತ್ವದಲ್ಲಿ ರೈತರು ಗುರುವಾರ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ‘‘ಕಿಸಾನ್ ಮಜ್ದೂರ್ ಮಹಾಪಂಚಾಯತ್’’ ನಡೆಸಿದರು.
ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾ ನಿರತ ರೈತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಗೆ ನಿರಾಪೇಕ್ಷಣಾ ಪತ್ರ ನೀಡಿದ ಬಳಿಕ ದಿಲ್ಲಿ ಪೊಲೀಸರು ಕೇವಲ 5000 ಪ್ರತಿಭಟನಕಾರರಿಗೆ ಮಾತ್ರ ಅವಕಾಶ, ದೊಣ್ಣೆ ಅಥವಾ ಇತರ ಯಾವುದೇ ಹರಿತವಾದ ಆಯುಧಗಳಿಗೆ ನಿಷೇಧ ಮೊದಲಾದ ನಿರ್ಬಂಧಗಳನ್ನು ವಿಧಿಸಿದ್ದರು.
‘ಮಹಾಪಂಚಾಯತ್’ ನಡೆಸಲು ದಿಲ್ಲಿ ಪೊಲೀಸರು ಹಾಗೂ ಎಂಸಿಡಿ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿದೆ ಎಂದು ಎಸ್ಕೆಎಂನ ರಾಷ್ಟ್ರೀಯ ಸಮನ್ವಯ ಸಮಿತಿಯ ಸದಸ್ಯ ದರ್ಶನ್ ಪಾಲ್ ತಿಳಿಸಿದ್ದಾರೆ.
‘ಮಹಾಪಂಚಾಯತ್’ಗಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಬಸ್ ಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಪೊಲೀಸರು ಕಲ್ಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಮಹಾಪಂಚಾಯತ್’ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದರು. ದಿಲ್ಲಿ ಸಂಚಾರ ಪೊಲೀಸರು ಸಂಚಾರ ನಿರ್ಬಂಧ ವಿಧಿಸಿದ್ದರು.