ಕೊಚ್ಚಿ: ಯುವಕನ ಸಾವಿನ ಬಳಿಕ ಕುಸಿದ ಶವರ್ಮಾ ಮಾರಾಟ

Update: 2023-11-01 15:13 GMT

ಸಾಂದರ್ಭಿಕ ಚಿತ್ರ (Photo credit:licious.in)

ಕೊಚ್ಚಿ: ಕಕ್ಕನಾಡ್‌ನ ರೆಸ್ಟೋರಂಟ್‌ವೊಂದರಲ್ಲಿ ಶವರ್ಮಾ ತಿಂದ ಬಳಿಕ ರಾಹುಲ್ ಡಿ.ನಾಯರ್ (24) ಎಂಬ ಯುವಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೊಚ್ಚಿಯ ಹೋಟೆಲ್‌ಗಳಲ್ಲಿ ಈ ಖಾದ್ಯಕ್ಕೆ ಬೇಡಿಕೆ ಗಣನೀಯವಾಗಿ ಕುಸಿದಿದೆ. ಕಳೆದ ಮೂರು ದಿನಗಳಲ್ಲಿ ಶವರ್ಮಾದ ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟದಲ್ಲಿ ಶೇ.30ರಿಂದ ಶೇ.40ರಷ್ಟು ಇಳಿಕೆಯಾಗಿದೆ ಎಂದು ಹಲವಾರು ಶವರ್ಮಾ ಸ್ಪೆಷಾಲಿಟಿ ರಸ್ಟೋರಂಟ್‌ಗಳು ಕಳವಳ ವ್ಯಕ್ತಪಡಿಸಿವೆ.

‘ನಾವು ಈ ಹಿಂದೆ ದಿನಕ್ಕೆ 250ರಿಂದ 300 ಶವರ್ಮಾ ರೋಲ್‌ಗಳನ್ನು ಮಾರಾಟ ಮಾಡುತ್ತಿದ್ದೆವು. ಆದರೆ ಯುವಕನ ಸಾವಿನ ಸುದ್ದಿ ತಿಳಿದಾಗಿನಿಂದ ಜನರು ಶವರ್ಮಾದಿಂದ ದೂರವುಳಿದಿದ್ದಾರೆ. ನಮ್ಮ ನಿಯಮಿತ ಗ್ರಾಹಕರೂ ಅದನ್ನು ಬಯಸುತ್ತಿಲ್ಲ’ ಎಂದು ರೆಸ್ಟೋರಂಟ್‌ವೊಂದರ ಮ್ಯಾನೇಜರ್ ಅಷ್ಕರ್ ತಿಳಿಸಿದರು.

ಈ ವರ್ಷದ ಪೂರ್ವಾರ್ಧದಲ್ಲಿ ಕೇರಳ ಸರಕಾರವು ಶವರ್ಮಾ ತಯಾರಿಕೆಗೆ ಬಳಕೆಯಾಗುವ ಮಯೊನ್ನೈಸ್ ಅಥವಾ ಮಸಾಲೆಯಲ್ಲಿ ಹಸಿಮೊಟ್ಟೆಗಳ ಬಳಕೆಯನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿತ್ತು.

ಹಸಿಮೊಟ್ಟೆಗಳೊಂದಿಗೆ ಮಯೊನ್ನೈಸ್ ತಯಾರಿಕೆ ಸುಲಭವಾಗಿದೆ ಮತ್ತು ಹೆಚ್ಚು ಸಮಯ ಬೇಕಾಗಿಲ್ಲ. ಸರಕಾರವು ನಿಷೇಧಿಸಿದ್ದರೂ ಕೆಲವು ಹೋಟೆಲ್‌ಗಳು ಈಗಲೂ ಹಸಿಮೊಟ್ಟೆಗಳನ್ನು ಬಳಸುತ್ತಿವೆ. ಮಯೊನ್ನೈಸ್ ತಯಾರಿಸಿದ ಬಳಿಕ 2-3 ಗಂಟೆಗಳ ಕಾಲವಷ್ಟೇ ಬಳಕೆಗೆ ಯೋಗ್ಯವಾಗಿರುತ್ತದೆ. ಎಲ್ಲ ಹೋಟೆಲ್‌ಗಳಲ್ಲೂ ತಪಾಸಣೆ ನಡೆಸುವುದು ಆರೋಗ್ಯ ಇಲಾಖೆಗೆ ಸವಾಲಿನದಾಗಿದೆ ಎಂದು ಕೇರಳ ಹೋಟೆಲ್ ಮತ್ತು ರೆಸ್ಟೋರಂಟ್ ಸಂಘದ ಮೂಲಗಳು ತಿಳಿಸಿದವು.

ಆದರೆ ತಮ್ಮಲ್ಲಿ ಶವರ್ಮಾ ಮಾರಾಟದಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದು ಕೆಲವು ರೆಸ್ಟೋರಂಟ್‌ಗಳು ಹೇಳಿವೆ.

‘ನಮ್ಮ ರೆಸ್ಟೋರಂಟ್‌ಗಳಲ್ಲಿ ಶವರ್ಮಾ ಮಾರಾಟ ಸ್ಥಿರವಾಗಿದೆ. ನಮ್ಮ ಅಡಿಗೆ ಮನೆಗಳನ್ನು ಯಾರೂ ಬೇಕಾದರೂ ನೋಡಬಹುದು. ನಾವು ಮಯೊನ್ನೈಸ್ ತಯಾರಿಕೆಗೆ ಮೊಟ್ಟೆಗಳನ್ನು ಬಳಸುವುದಿಲ್ಲ ’ ಎಂದು ಅಲ್ ತಾಜಾದ ಜನರಲ್ ಮ್ಯಾನೇಜರ್ ಶ್ರೆಧಾ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News