ಬೇಡಿಕೆ ಕೊರತೆ: ವಾಹನ ಮಾರಾಟ ತೀವ್ರ ಕುಸಿತ

Update: 2024-10-08 03:53 GMT

PC: PTI

ಹೊಸದಿಲ್ಲಿ: ದೇಶದಲ್ಲಿ ವಾಹನ ಚಿಲ್ಲರೆ ಮಾರಾಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸೆಪ್ಟೆಂಬರ್ ನಲ್ಲಿ ಶೇಕಡ 9ರಷ್ಟು ಕುಸಿತ ಕಂಡಿದೆ. ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಗಣನೀಯವಾಗಿ ಕುಸಿದಿರುವುದು ಇದಕ್ಕೆ ಕಾರಣದ ಎಂದು ಡೀಲರ್ ಗಳ ಸಂಘಟನೆಯಾದ ಎಫ್ಎಡಿಎ ಹೇಳಿದೆ.

2023ರ ಸೆಪ್ಟೆಂಬರ್ ನಲ್ಲಿ 19 ಲಕ್ಷ ವಾಹನಗಳು ನೋಂದಣಿಯಾಗಿದ್ದರೆ, ಕಳೆದ ತಿಂಗಳು ಕೇವಲ 17.2 ಲಕ್ಷ ವಾಹನಗಲು ನೋಂದಾಯಿಸಲ್ಪಟ್ಟಿವೆ. ಪ್ರಯಾಣಿಕ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಸೇರಿದಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಗತಿ ಕುಂಠಿತವಾಗಿದೆ.

"ಗಣೇಶ ಚತುರ್ಥಿ, ಓಣಂನಂಥ ಹಬ್ಬದ ಸೀಸನ್ ಹೊರತಾಗಿಯೂ, ಸಾಧನೆ ಬಹುತೇಕ ಸ್ಥಗಿತವಾದಂತಾಗಿದೆ" ಎಂದು ಫೆಡರೇಷನ್ ಆಫ್ ಅಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಸ್.ವಿಘ್ನೇಶ್ವರ ಹೇಳಿದ್ದಾರೆ. ವರ್ಷದ ಹಿಂದೆ 3,39,543 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ಕಳೆದ ತಿಂಗಳು ಇದು 2,75,681ಕ್ಕೆ ಇಳಿದು, ಶೇಕಡ 19ರಷ್ಟು ಇಳಿಕೆ ದಾಖಲಿಸಿದೆ.

"ಶ್ರಾದ್ಧ ಮತ್ತು ಪಿತೃ ಪಕ್ಷದಂಥ ಸಾಂದರ್ಭಿಕ ಅಂಶಗಳು, ಭಾರಿ ಮಳೆ ಹಾಗೂ ಆರ್ಥಿಕತೆಯ ನಿಧಾನ ಪ್ರವೃತ್ತಿ ಪರಿಸ್ಥಿತಿ ಉಲ್ಬಣಗೊಳ್ಳಲು ಕಾರಣವಾಗಿದೆ" ಎಂದು ವಿವರಿಸಿದರು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದ್ವಿಚಕ್ರ ವಾಹನ ಮಾರಾಟದಲ್ಲೂ ಇಳಿಕೆ ಕಂಡುಬಂದಿದ್ದು, 12,04,259ಕ್ಕೆ ಕುಸಿದಿದೆ. ಗ್ರಾಹಕರ ಖರೀದಿ ಭಾವನೆ ಕುಸಿತ, ವಿಚಾರಣೆ ಕಡಿಮೆಯಾಗಿರುವುದು ಮತ್ತು ನೇರವಾಗಿ ಬಂದು ವಾಹನ ಖರೀದಿ ಮಾಡುವವರ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಕಾರಣ. ವಾಣಿಜ್ಯ ವಾಹನಗಳ ನೋಂದಣಿ ಕೂಡಾ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 8ರಷ್ಟು ಕುಸಿತ ಕಂಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News