ಜಮೀನು ವಿವಾದ | ಮತ್ತೊಬ್ಬನನ್ನು ಕೊಲ್ಲಲು ಸುಪಾರಿ ನೀಡಿ ತಾನೂ ಕೊಲೆಯಾದ ರಿಯಲ್ ಎಸ್ಟೇಟ್ ಏಜೆಂಟ್

Update: 2024-08-30 17:09 GMT

PC : newsbytesapp.com

ಮುಂಬೈ: ರಿಯಲ್ ಎಸ್ಟೇಟ್ ಏಜೆಂಟನೊಬ್ಬ, ಇನ್ನೊಬ್ಬ ಏಜೆಂಟ್ ನನ್ನು ಕೊಲ್ಲಲು ಸುಪಾರಿ ನೀಡಿ, ಸುಪಾರಿ ಪಡೆದುಕೊಂಡವರಿಂದ ತಾನೂ ಕೊಲೆಯಾದ ಪ್ರಕರಣ ನವೀ ಮುಂಬೈ ನಲ್ಲಿ ವರದಿಯಾಗಿದೆ.

ಪ್ರಕರಣ ಸಂಬಂಧ ನವೀ ಮುಂಬೈ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇಬ್ಬರು ರಿಯಲ್ ಎಸ್ಟೇಟ್ ಏಜೆಂಟ್‌ಗಳು ನಾಪತ್ತೆಯಾದ ಒಂದು ವಾರದ ನಂತರ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರ ಮೃತದೇಹಗಳು ಮುಂಬೈನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಒಬ್ಬ ಏಜೆಂಟ್ ಇನ್ನೊಬ್ಬನನ್ನು ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದನು. ಆದರೆ ಆತನೂ ಪ್ರಕರಣದಲ್ಲಿ ಕೊಲೆಯಾಗಿದ್ದಾನೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧಿಸುತ್ತಿದ್ದಾರೆ.

39 ವರ್ಷದ ಸುಮಿತ್ ಜೈನ್ ಎಂಬಾತ ಅಮೀರ್ ಖಾಂಜಾದಾ ಹತ್ಯೆಗೆ ಸುಪಾರಿ ನೀಡಿದ್ದ. ನಾಪತ್ತೆಯಾದ ನಂತರ ಅವರಿಬ್ಬರ ಮೃತದೇಹಗಳು ನವೀ ಮುಂಬೈನಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿವೆ. ಜೈನ್ ನ ಮೃತದೇಹ ಆಗಸ್ಟ್ 23 ರಂದು ಪೆನ್-ಖೋಪೋಲಿ ರಸ್ತೆಯಲ್ಲಿ ಪತ್ತೆಯಾಗಿದ್ದರೆ, ಆಗಸ್ಟ್ 27 ರಂದು ಕರ್ನಾಲಾ ಪಕ್ಷಿಧಾಮದ ಬಳಿ ಖಾನ್ ಝಾದಾನ ಮೃತದೇಹ ಪತ್ತೆಯಾಗಿತ್ತು.

ಪಂಕಜ್ ದಹಾನೆ ಎಂಬವರು ರಾಯಘಡದ ಪಾಲಿಯಲ್ಲಿ 3.5 ಎಕರೆ ಭೂಮಿಯನ್ನು 2 ಕೋಟಿ ರೂ.ಗೆ ಖರೀದಿಸಿದ್ದರು. ಜಮೀನಿನ ನಿಜವಾದ ಮಾಲಕರು ಮೃತಪಟ್ಟಿದ್ದರಿಂದ ನೋಂದಣಿಗಾಗಿ ನಕಲಿ ಭೂಮಾಲೀಕರನ್ನು ಜೈನ್ ಹಾಜರುಪಡಿಸಿದ್ದನು. ಜೈನ್ ಈ ಹಿಂದೆಯೂ ಆಸ್ತಿಗಳನ್ನು ಮಾರಾಟ ಮಾಡಲು ನಕಲಿ ಭೂ ಮಾಲೀಕರನ್ನು ಸೃಷ್ಟಿಸಿದ ವಂಚನೆಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಸುಮಿತ್ ಜೈನ್ ನ ಈ ರೀತಿಯ ವಂಚನೆಗಳ ಬಗ್ಗೆ ತಿಳಿದಿದ್ದ ಖಾನ್ ಝಾದಾ, ರಾಯಘಡದ ಭೂ ಖರೀದಿ ತಿಳಿದು, ವ್ಯವಹಾರದಲ್ಲಿ ಪ್ರವೇಶಿಸಿ, ಪಾಲು ಕೇಳಿದ್ದ ಎನ್ನಲಾಗಿದೆ. ಆಗ ಸುಮಿತ್ ಜೈನ್ ತನ್ನ ಇನ್ನೊಬ್ಬ ಪಾಲುದಾರ ವಿಠಲ್ ನಕಡೆ ಯನ್ನು ಸಂಪರ್ಕಿಸಿ 50 ಲಕ್ಷ ರೂ. ನೀಡುವುದಾಗಿ ತಿಳಿಸಿ, ಖಾನ್ ಝಾದಾ ನನ್ನು ಕೊಲೆ ಮಾಡುವಂತೆ ಸೂಚಿಸಿದ್ದ ಅದರಂತೆ ಬಾಡಿಗೆ ಹಂತಕರನ್ನು ನೇಮಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದು, ಖಾನ್ ಝಾದಾ ನನ್ನು ಕೊಲೆ ಮಾಡಲು ಸುಮಿತ್ ಸಂಚು ರೂಪಿಸಿದ. ಯೋಜನೆಯ ಭಾಗವಾಗಿ ಖಾನ್ ಝಾದಾ ನನ್ನು ನೆರೂಲ್‌ ನಲ್ಲಿ ಭೇಟಿಯಾಗಿ ರಾಯಘಡದ ಆಸ್ತಿಯ ವಿಚಾರವಾಗಿ ಭೇಟಿ ಮಾಡಲು ಹೋಗಬೇಕಾಗಿದೆ ಎಂದು ಕರೆದೊಯ್ದಿದ್ದಾನೆ. ಖಾನ್ ಝಾದಾನದ್ದೇ ಕಾರಿನಿಂದ ಇಳಿಯುವಾಗ ಬಾಡಿಗೆ ಹಂತಕರಲ್ಲಿ ಒಬ್ಬ ಗುಂಡಿಕ್ಕಿ ಖಾನ್ ಝಾದಾ ನನ್ನು ಕೊಲೆ ಮಾಡಿದ್ದಾನೆ. ಬಳಿಕ ಸುಮಿತ್ ಜೈನ್ ಖಾನ್ ಝಾದಾ ನನ್ನು ಕೊಂದ ಅಪಹರಣಕಾರರಿಂದ ತಾನು ತಪ್ಪಿಸಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಲು ತನ್ನ ಕಾಲಿಗೆ ಗುಂಡು ಹಾರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಖಾನ್ ಝಾದಾ ಕೊಲ್ಲಲ್ಪಟ್ಟಾಗ ಅಪಹರಣಕಾರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರಿಗೆ ಹೇಳಲು ಸುಮಿತ್ ಯೋಜಿಸಿದ್ದ ಎನ್ನಲಾಗಿದೆ.

ಸುಮಿತ್ ಮತ್ತು ಇನ್ನೊಬ್ಬ ಪಾಲುದಾರ ನಕಾಡೆ ಸೇರಿದಂತೆ ಆರು ಮಂದಿ ಕರ್ನಾಲಾ ಪಕ್ಷಿಧಾಮದ ಕಡೆಗೆ ಪ್ರಯಾಣಿಸಿದ್ದಾರೆ. ಅಲ್ಲಿ ಅವರು ಖಾನ್ ಝಾದಾನ ಮೃತದೇಹವನ್ನು ಎಸೆದರು ಎನ್ನಲಾಗಿದೆ.

ಪೆನ್-ಖೋಪೋಲಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬಾಡಿಗೆ ಹಂತಕರಲ್ಲಿ ಒಬ್ಬ ಹಣ ಪಾವತಿಸುವಂತೆ ಒತ್ತಾಯಿಸಿದ್ದಾನೆ. ಆದರೆ, ವರಸೆ ಬದಲಾಯಿಸಿದ ಜೈನ್, 50 ಲಕ್ಷ ರೂಪಾಯಿ ನೀಡಲು ನಿರಾಕರಿಸಿ, 25 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.

ಮಾತಿಗೆ ಮಾತು ಬೆಳೆದು ಹಂತಕರು ಮತ್ತು ಪಾಲುದಾರ ನಕಾಡೆ, ಜೈನ್ ತಮಗೆ ಮೋಸ ಮಾಡುತ್ತಿದ್ದಾನೆ ಎಂದು ಆತನ ಮೇಲೆ ದಾಳಿ ಮಾಡಿದ್ದಾರೆ. ಬಾಡಿಗೆ ಹಂತಕರಲ್ಲಿ ಒಬ್ಬ , ಸುಮಿತ್ ಜೈನ್ ಗುಂಡು ಹಾರಿಸಿಕೊಂಡ ಅದೇ ಕಾಲಿಗೆ ಚೂರಿಯಿಂದ ಇರಿದು ರಸ್ತೆಬದಿಯಲ್ಲಿ ಎಸೆದಿದ್ದಾನೆ. ಎರಡು ದಿನಗಳ ಕಾಲ ನಾಪತ್ತೆಯಾಗಿದ್ದ ಜೈನ್ ಗುಂಡು ಮತ್ತು ಇರಿತದ ಗಾಯಗಳಿಂದ ಅತಿಯಾದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾನೆ ಎಂದು ಎಸಿಪಿ ಅಜಯ್ ಲಾಂಡ್ಜೆ times of India ಗೆ ತಿಳಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಜೈನ್‌ನ ಪಾಲುದಾರ ವಿಠಲ್ ನಕಾಡೆ ಮತ್ತು ಬಾಡಿಗೆ ಹಂತಕರಾದ ಉಲ್ಲಾಸ್‌ನಗರದ ಅಂಕುಶ ಸಿತಾಪುರೆ, ಕಂಜುರ್‌ಮಾರ್ಗ್‌ನ ವೀರೇಂದ್ರ ಕದಮ್, ಬದ್ಲಾಪುರದ ರಾಜಾ ಮುದ್ಲಿಯಾರ್ ಮತ್ತು ನೆರೂಲ್‌ನ ಆನಂದ್ ಅಲಿಯಾಸ್ ಆಂಡ್ರಿ ಕ್ರೂಜ್ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News