ಸಿಕ್ಕಿಂನಲ್ಲಿ ಭೂಕುಸಿತ | 200ಕ್ಕೂ ಅಧಿಕ ಪ್ರವಾಸಿಗರ ಸ್ಥಳಾಂತರ
ಸಿಲಿಗುರಿ : ಭೂಕುಸಿತ ಸಂಭವಿಸಿದ ಸಿಕ್ಕಿಂನ ಮಂಗಾನ್ ಜಿಲ್ಲೆಯ ಲಾಚಂಗ್‌ನಿಂದ 200ಕ್ಕೂ ಅಧಿಕ ಪ್ರವಾಸಿರನ್ನು ಸ್ಥಳಾಂತರಿಸಲಾಗಿದೆ. ಸುಮಾರು 1000 ಪ್ರವಾಸಿಗರು ಈಗಲೂ ಅಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
ಪ್ರವಾಸಿಗರನ್ನು ಚುಂಗಥಂಗ ಮೂಲಕ ಸ್ಥಳಾಂತರಿಸಲಾಗಿದೆ ಹಾಗೂ ಮಂಗಾನ್ ಪಟ್ಟಣಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಂದ ಅವರನ್ನು ಗ್ಯಾಂಗ್ಟಕ್‌ಗೆ ಕರೆದೊಯ್ಯಲು ಸಾರಿಗೆ ಇಲಾಖೆ ವಾಹನಗಳನ್ನು ವ್ಯವಸ್ಥೆಗೊಳಿಸಿದೆ ಎಂದು ಪೊಲೀಸ್ ಅಧೀಕ್ಷಕ (ಎಸ್‌ಪಿ) ಸೋನಮ್ ದೆಚ್ಚು ಭುಟಿಯಾ ತಿಳಿಸಿದ್ದಾರೆ.
ಉತ್ತರ ಸಿಕ್ಕಿಂ ಲಾಚುಂಗ್‌ನಲ್ಲಿ ಸಿಲುಕಿದ್ದ ಸುಮಾರು 150 ಮಂದಿ ಪ್ರವಾಸಿಗರನ್ನು ಮಂಗಳವಾರ ಸ್ಥಳಾಂತರಿಸಲಾಗಿದೆ. 64 ಮಂದಿ ಪ್ರವಾಸಿಗರನ್ನು ಸೋಮವಾರ ಸ್ಥಳಾಂತರಿಸಲಾಗಿದೆ. ಅವರನ್ನು ಮಂಗಾನ್ ಪಟ್ಟಣಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗಡಿ ರಸ್ತೆ ಸಂಘಟನೆ (ಬಿಆರ್‌ಒ), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಇತರ ಸ್ವಯಂ ಸೇವಕರೊಂದಿಗೆ ಜಿಲ್ಲಾಡಳಿತ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.