ಜಾಗತಿಕ ವಿಶ್ವಾಸದ ಕೊರತೆಯನ್ನು ನೀಗಿಸಲು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರವಾಗಲಿ: ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

Update: 2023-09-09 17:52 GMT

ನರೇಂದ್ರ ಮೋದಿ | Photo: PTI 

ಹೊಸದಿಲ್ಲಿ: 21ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿರುವ ಹಳೆಯ ಸವಾಲುಗಳಿಗೆ ನೂತನ ಮಾದರಿಯ ಪರಿಹಾರಗಳನ್ನು ಕಂಡುಹಿಡಿಯುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದ್ದಾರೆ. ಜಾಗತಿಕ ಸವಾಲುಗಳಿಗೆ ಸ್ಪಂದಿಸುವಾಗ ಮಾನವಕೇಂದ್ರೀತ ನಿಲುವನ್ನು ಅನುಸರಿಸುವಂತೆಯೂ ಅವರು ಕರೆ ನೀಡಿದ್ದಾರೆ. ಜಾಗತಿಕ ವಿಶ್ವಾಸದ ಕೊರತೆಯನ್ನು ನೀಗಿಸಲು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್ ( ಎಲ್ಲರೊಂದಿಗೆ, ಎಲ್ಲರ ವಿಕಾಸ) ’ ಎಂಬ ಮಂತ್ರವು ನಮಗೆ ದಾರಿದೀಪವಾಗಬೇಕು ಎಂದವರು ಹೇಳಿದ್ದಾರೆ.

ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿನ ಭಾರತ ಮಂಡಪಂನಲ್ಲಿ ಜಿ20 ಶೃಂಗಸಭೆಯ ಉದ್ಘಾಟನಾ ಭಾಷಣ ಮಾಡಿದ ಅವರು, ಜಾಗತಿಕ ಸವಾಲುಗಳನ್ನು ಪರಿಹರಿಸಲು ಹಾಗೂ ಸಂಘರ್ಷಗಳಿಂದ ಉಂಟಾಗುವ ವಿಶ್ವಾಸದ ಕೊರತೆಯನ್ನು ನೀಗಿಸಲು ಮಾನವ ಕೇಂದ್ರೀತ ನಿಲುವನ್ನು ಅಳವಡಿಸಿಕೊಳ್ಳುವಪ ಅಗತ್ಯವಿದೆಯೆಂದು ಹೇಳಿದರು.

‘‘ ಜಗತ್ತಿಗೆ ನೂತನ ದಿಕ್ಕನ್ನು ತೋರಿಸಲು 21ನೇ ಶತಮಾನವು ಅತ್ಯಂತ ಮಹತ್ವದ ಸಮಯವಾಗಿದೆ. ಹಳೆಯ ಸಮಸ್ಯೆಗಳು ನಮ್ಮಿಂದ ವಿನೂತನ ಮಾದರಿಯ ಪರಿಹಾರಗಳನ್ನು ಬಯಸುತ್ತಿರುವ ಸಮಯ ಇದಾಗಿದೆ. ಆದುದರಿಂದ ನಾವು ಮಾನವ ಕೇಂದ್ರೀತ ನಿಲುವಿನೊಂದಿಗೆ ಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸಬೇಕಾಗಿದೆ ಎಂದವರು ಹೇಳಿದರು.

ಕೋವಿಡ್ ಸಾಂಕ್ರಾಮಿಕದ ಬಳಿಕ ಜಗತ್ತು ವಿಶ್ವಾಸದ ಕೊರತೆಯ ನೂತನ ಸವಾಲನ್ನು ಎದುರಿಸುತ್ತಿದೆ. ದುರದೃಷ್ಟವಶಾತ್ ಯುದ್ಧಗಳು ಜಾಗತಿಕ ವಿಶ್ವಾಸದ ಕೊರತೆಯನ್ನು ಇನ್ನಷ್ಟು ಗಾಢವಾಗಿಸಿದೆ. ಆದರೆ ಒಂದು ವಿಷಯವನ್ನು ನಾವು ನೆನಪಿಡಬೇಕಾಗಿದೆ. ಒಂದು ವೇಳೆ ಕೋವಿಡ್ನಂತಹ ಸಾಂಕ್ರಾಮಿಕವನ್ನು ನಮಗೆ ಸೋಲಿಸಲು ಸಾಧ್ಯವಿದೆಯೆಂದಾದರೆ,ವಿಶ್ವಾಸದ ಕೊರತೆಯ ಸವಾಲಿನ ವಿರುದ್ಧವೂ ನಾವು ಜಯಗಳಿಸಬಹುದಾಗಿದೆ’’ ಎಂದವರು ಹೇಳಿದರು.

ಜಾಗತಿಕ ಮಟ್ಟದಲ್ಲಿ ವಿಶ್ವಾಸದ ಕೊರತೆಯು ಉಕ್ರೇನ್ ಯುದ್ಧಕ್ಕೆ ಕಾರಣವಾಯಿತು ಎಂದವರು ಹೇಳಿದರು. ಹೀಗಾಗಿ ಈ ಕೊರತೆಯನ್ನು ನೀಗಿಸಲು ಎಲ್ಲಾ ಜಿ20 ಶೃಂಗಸಭೆಯ ನಾಯಕರು ಒಗ್ಗೂಡಿ ಶ್ರಮಿಸಬೇಕೆಂದು ಅವರು ಹೇಳಿದರು.

‘‘ ಜಾಗತಿಕ ವಿಶ್ವಾಸದ ಕೊರತೆಯನ್ನು ವಿಶ್ವಾಸ ಹಾಗೂ ಅವಲಂಬನೆಯಾಗಿ ಪರಿವರ್ತಿಸಲು ಜಗತ್ತು ಜೊತೆಯಾಗಿ ಕೆಲಸ ಮಾಡಬೇಕೆಂದು ಜಿ20 ಅಧ್ಯಕ್ಷನಾಗಿ ಭಾರತವು ಜಗತ್ತಿಗೆ ಕರೆ ನೀಡುತ್ತದೆ. ನಾವೆಲ್ಲರೂ ಜೊತೆಯಾಗಿ ಮುಂದೆ ಸಾಗಲು ಇದು ಸಕಾಲವಾಗಿದೆ. ಈ ಸಮಯದಲ್ಲಿ ‘ಸಬ್ಕಾ ಸಾಥ್ ಸಬ್ ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಎಂಬ ಮಂತ್ರವು ನಮಗೆ ದಾರಿದೀಪವಾಗಬೇಕಾಗಿದೆ ಎಂದವರು ಪ್ರಧಾನಿ ಮೋದಿ ಹೇಳಿದರು.

‘‘ಉತ್ತರ ಹಾಗೂ ದಕ್ಷಿಣದ ನಡುವಿನ ವಿಭಜನೆಯಿರಲಿ, ಪೂವ ಹಾಗೂ ಪಶ್ಚಿಮದ ನಡುವಿನ ಅಂತರವಿರಲಿ, ಆಹಾರ ಹಾಗೂ ಇಂಧನ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಸುರಕ್ಷತೆ, ಆರೋಗ್ಯ, ಇಂಧನ ಅಥವಾ ಜಲ ಸುರಕ್ಷತೆ ಇವೆಲ್ಲವುಗಳಿಗೂ ನಾವು ಮುಂದಿನ ತಲೆಮಾರುಗಳಿಗೆ ದೃಢವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ’’ ಎಂದವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News