ಗೋಡ್ಸೆಯ ಚಿಂತನೆ, ಕೃತ್ಯಗಳನ್ನು ವೈಭವೀಕರಿಸುವ ಶಕ್ತಿಗಳ ವಿರುದ್ಧ ಹೋರಾಡೋಣ: ಜೈರಾಮ್ ರಮೇಶ್
ಹೊಸದಿಲ್ಲಿ : ಮಹಾತ್ಮಾ ಗಾಂಧಿ ಅವರ ಹಂತಕ ನಾಥುರಾಮ್ ಗೋಡ್ಸೆಯ ಚಿಂತನೆ ಹಾಗೂ ಕೃತ್ಯಗಳನ್ನು ವೈಭವೀಕರಿಸುವ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಮಂಗಳವಾರ ಪ್ರತಿಜ್ಞೆ ಮಾಡಿದ್ದಾರೆ.
“ಈ ಗಾಂಧಿ ಜಯಂತಿಯಂದು ದೇಶದ ವಿವಿಧ ಭಾಗಗಳಲ್ಲಿರುವ ಮುಖ್ಯವಾಗಿ ವಾರಣಾಸಿ, ಅಹ್ಮದಾಬಾದ್ ಹಾಗೂ ಹೊಸದಿಲ್ಲಿಯಲ್ಲಿರುವ ಗಾಂಧಿವಾದಿ ಸಂಘಟನೆಗಳೊಂದಿಗೆ ಬೆಂಬಲವಾಗಿ ನಿಲ್ಲೋಣ. ಗಾಂಧಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ಹಾಗೂ ಅವರ ಹತ್ಯೆಗೆ ಕಾರಣವಾದ ವಾತಾವರಣ ಸೃಷ್ಟಿಸಿದ ಶಕ್ತಿಗಳು ಈ ಸಂಘಟನೆಗಳ ಮೇಲೆ ದಾಳಿ ನಡೆಸುತ್ತಿವೆ. ಗೋಡ್ಸೆ ಚಿಂತನೆ ಹಾಗೂ ಕೃತ್ಯವನ್ನು ವೈಭವೀಕರಿಸುವ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡೋಣ’’ ಎಂದು ಜೈರಾಮ್ ರಮೇಶ್ ‘x’ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ಗಾಂಧಿ ಜಯಂತಿಯಂದು ಗಾಂಧಿ ಸಂಕೇತಗಳಾದ ಕನ್ನಡಕ, ಚರಕ ಹಾಗೂ ಊರುಗೋಲು ಹಾಗೂ ಅವರ ಪರಂಪರೆಯನ್ನು ಜಗತ್ತಿಗೆ ಪ್ರಚಾರ ಮಾಡುತ್ತಿರುವ ಆದರೆ, ಅವರು ಪ್ರತಿಪಾದಿಸಿದ ಚಿಂತನೆಗಳನ್ನು ಎತ್ತಿ ಹಿಡಿಯದವರ ಆಷಾಡಭೂತಿತನವನ್ನು ಬಹಿರಂಗಪಡಿಸೋಣ’’ ಎಂದು ಅವರು ಪೋಸ್ಟ್ನಲ್ಲಿ ಹೇಳಿದ್ದಾರೆ.
“ಈ ಗಾಂಧಿ ಜಯಂತಿಯಂದು ಗಾಂಧಿ ಅವರು ಅನುಸರಿಸಿದ ಪಾರದರ್ಶಕತೆ ಹಾಗೂ ಮುಕ್ತತೆ, ತನ್ನ ವಿರೋಧಿಗಳ ವಿರುದ್ಧ ಯಾವುದೇ ಸೇಡಿನ ಭಾವನೆ ಹೊಂದಿರದೇ ಇರುವುದು, ಧರ್ಮಾಂಧತೆ, ಪೂರ್ವಾಗ್ರಹ ಹಾಗೂ ದ್ವೇಷವನ್ನು ತೊಡೆದು ಹಾಕಲು ಪ್ರಯತ್ನಿಸಿರುವುದು, ಜನರನ್ನು ಪ್ರಚೋದಿಸಲು ಧರ್ಮವನ್ನು ಬಳಸದೇ ಇರುವುದನ್ನು ನಾವು ನೆನಪಿಸಿಕೊಳ್ಳೋಣ’’ ಎಂದು ಜೈರಾಮ್ ರಮೇಶ್ ಹೇಳಿದರು.