ಆರೋಗ್ಯ ವಿಮಾ ಕ್ಷೇತ್ರ ಪ್ರವೇಶಕ್ಕೆ ಎಲ್ ಐಸಿ ಚಿಂತನೆ
ಮುಂಬೈ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವವಿಮಾ ನಿಗಮ ಆರೋಗ್ಯ ವಿಮಾ ಕ್ಷೇತ್ರ ವಲಯ ಪ್ರವೇಶಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಈ ಕ್ಷೇತ್ರದ ಇತರ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಅವಕಾಶಗಳನ್ನು ಪರಿಶೀಲಿಸುತ್ತಿದೆ. ಈ ವಲಯದಲ್ಲಿ ಸಂಯುಕ್ತ ವಿಮಾ ಕಂಪನಿಗಳಿಗೆ ಅವಕಾಶ ನೀಡುವ ಪ್ರಸ್ತಾವದ ನಡುವೆಯೇ ಎಲ್ ಐಸಿ ಈ ಮಹತ್ವದ ಹೆಜ್ಜೆ ಇಟ್ಟಿದೆ.
"ಹೊಸ ಸರ್ಕಾರ ಆರೋಗ್ಯ ವಿಮಾ ಕ್ಷೇತ್ರದಲ್ಲಿ ಸಂಯೋಜಿತ ಲೈಸನ್ಸ್ ನೀಡುವ ಸಾಧ್ಯತೆ ಇದ್ದು, ಆಂತರಿಕವಾಗಿ ಈ ಸಂಬಂಧ ಮೂಲಭೂತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ" ಎಂದು ಉನ್ನತ ಮೂಲಗಳು ಹೇಳಿವೆ.
"ಸಾಮಾನ್ಯ ವಿಮೆಯಲ್ಲಿ ನಾವು ನೈಪುಣ್ಯದ ಕೊರತೆ ಹೊಂದಿದ್ದು, ಆರೋಗ್ಯವಿಮೆಯಲ್ಲಿ ಆಸಕ್ತಿ ಹೊಂದಿದ್ದೇವೆ. ಅಜೈವಿಕ ಪ್ರಗತಿ ಅವಕಾಶಗಳನ್ನು ಕೂಡಾ ನಾವು ಪರಿಶೀಲಿಸುತ್ತಿದ್ದೇವೆ" ಎಂದು ಎಲ್ ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಾಂತಿ ಸ್ಪಷ್ಟಪಡಿಸಿದ್ದಾರೆ.
ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ವಿಮಾ ಕಂಪನಿಗಳ ಬದ್ಧತಾ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಯೋಜಿತ ಲೈಸನ್ಸ್ ನೀಡಲು 2024ರ ಫೆಬ್ರವರಿಯಲ್ಲಿ ಸಂಸದೀಯ ಸಮಿತಿ ಶಿಫಾರಸ್ಸು ಮಾಡಿತ್ತು. ಪ್ರಸ್ತುತ ಜೀವ ವಿಮಾ ಕಂಪನಿಗಳು ಕೇವಲ ಧೀರ್ಘಾವಧಿ ಪ್ರಯೋಜನಗಳ ಸುರಕ್ಷೆಯನ್ನು ಮಾತ್ರ ಆರೋಗ್ಯ ವಿಮೆಯಡಿ ನೀಡಲು ಅವಕಾಶವಿದೆ. ಆಸ್ಪತ್ರೆ ವೆಚ್ಚ ಮತ್ತು ನಷ್ಟ ಪರಿಹಾರ ಸುರಕ್ಷೆಯನ್ನು ನೀಡಲು ವಿಮಾ ಕಂಪನಿಗೆ ತಿದ್ದುಪಡಿ ತರುವ ಅಗತ್ಯವಿದೆ.
ಭಾರತದಲ್ಲಿ ಆರೋಗ್ಯವಿಮೆ ತೀರಾಕಡಿಮೆ ಇದ್ದು, 2022-23ರಲ್ಲಿ 55 ಕೋಟಿ ಮಂದಿಗೆ ಸುರಕ್ಷೆ ಒದಗಿಸುವ 2.3 ಕೋಟಿಗಿಂತ ಕಡಿಮೆ ಆರೋಗ್ಯ ವಿಮಾ ಪಾಲಿಸಿಗಳನ್ನು ನೀಡಲಾಗಿದೆ. ಈ ಪೈಕಿ ಸುಮಾರು 30 ಕೋಟಿ ಮಂದಿ ಸರ್ಕಾರಿ ಪ್ರಾಯೋಜಕತ್ವದ ವ್ಯವಹಾರದಲ್ಲಿ ಸುರಕ್ಷೆ ಪಡೆದಿದ್ದು, 20 ಕೋಟಿಮಂದಿ ಮಾತ್ರ ಗುಂಪು ವಿಮಾ ಸುರಕ್ಷೆ ಹೊಂದಿದ್ದಾರೆ. ಈ ಕ್ಷೇತ್ರಕ್ಕೆ ಎಲ್ ಐಸಿ ಪ್ರವೇಶಿಸಿದಲ್ಲಿ ಹೆಚ್ಚು ಮಂದಿಗೆ ವಿಮಾ ಸುರಕ್ಷೆ ನೀಡುವುದು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಸಂಸ್ಥೆಯದ್ದು.