ಲೋಕಸಭಾ ಚುನಾವಣೆ| ಮತದಾನ ತಪ್ಪಿಸಿಕೊಳ್ಳದಂತೆ ಮತದಾರರಿಗೆ ಸಿಜೆಐ ಚಂದ್ರಚೂಡ್ ಕರೆ

Update: 2024-04-20 07:16 GMT
ಲೋಕಸಭಾ ಚುನಾವಣೆ| ಮತದಾನ ತಪ್ಪಿಸಿಕೊಳ್ಳದಂತೆ ಮತದಾರರಿಗೆ ಸಿಜೆಐ ಚಂದ್ರಚೂಡ್ ಕರೆ

ಡಿ.ವೈ.ಚಂದ್ರಚೂಡ್ | PC : ANI

  • whatsapp icon

ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಆಗ್ರಹಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಸಾಂವಿಧಾನಿಕ ಪ್ರಜಾತಂತ್ರದಲ್ಲಿ ಇದು ಅತಿ ಮುಖ್ಯ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಗಾಗಿ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ‘ನನ್ನ ಮತ ನನ್ನ ಧ್ವನಿ’ ಎಂಬ ಧ್ವನಿ ಸಂದೇಶ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿರುವ ನ್ಯಾ. ಚಂದ್ರಚೂಡ್, “ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಜೆಗಳು ನಾವಾಗಿದ್ದು, ಅದು ನಮ್ಮ ದೇಶವಾಗಿದೆ” ಎಂದು ಹೇಳಿದ್ದಾರೆ.

“ಸಂವಿಧಾನವು ನಮಗೆ ಹಲವಾರು ಹಕ್ಕುಗಳನ್ನು ನೀಡಿದ್ದು, ಅದು ನಾವು ಕರ್ತವ್ಯಗಳನ್ನೂ ನಿಭಾಯಿಸಬೇಕು ಎಂದು ಬಯಸುತ್ತದೆ ಹಾಗೂ ಪೌರತ್ವದ ಬಹು ಮುಖ್ಯ ಕರ್ತವ್ಯವೆಂದರೆ, ಸಾಂವಿಧಾನಿಕ ಪ್ರಜಾತಂತ್ರದಲ್ಲಿ ಮತ ಚಲಾಯಿಸುವುದು” ಎಂದು ಅವರು ಕಿವಿಮಾತು ಹೇಳಿದ್ದಾರೆ.

“ನಮ್ಮ ಅದ್ಭುತ ತಾಯ್ನಾಡಿನ ಪ್ರಜೆಗಳಾಗಿ, ಮತದಾನ ಜವಾಬ್ದಾರಿಯ ಅವಕಾಶವನ್ನು ದಯವಿಟ್ಟು ತಪ್ಪಿಸಿಕೊಳ್ಳಬೇಡಿ ಎಂದು ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ. ಐದು ನಿಮಿಷಗಳು ನಮ್ಮ ದೇಶದ ಪ್ರತಿ ಐದು ವರ್ಷಗಳು. ಇದನ್ನು ಮಾಡಬಹುದು, ಅಲ್ಲವೆ? ನಾವು ಹೆಮ್ಮೆಯಿಂದ ಮತ ಚಲಾಯಿಸೋಣ. ನನ್ನ ಮತ ನನ್ನ ಧ್ವನಿ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕರೆ ನೀಡಿದ್ದಾರೆ.

ನಾನು ವಕೀಲನಾಗಿದ್ದಾಗ ಹಾಗೂ ಕೆಲಸಕ್ಕಾಗಿ ಅತ್ತಿತ್ತ ಅಲೆದಾಡುವಾಗಲೂ ನಾನು ಮತ ಚಲಾವಣೆಯ ಕರ್ತವ್ಯದಿಂದ ಎಂದೂ ತಪ್ಪಿಸಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಎಪ್ರಿಲ್ 19ರಿಂದ ಜೂನ್ 1, 2024ರವರೆಗೆ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ 18ನೇ ಲೋಕಸಭೆಗೆ 543 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News