ಲೋಕಸಭಾ ಚುನಾವಣೆಗಳು 2024 | ಎರಡನೇ ಹಂತದಲ್ಲಿ ಶುಕ್ರವಾರ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಲ್ಲಿ ಮತದಾನ
ಹೊಸದಿಲ್ಲಿ : ಲೋಕಸಭಾ ಚುನಾವಣೆಗಳಿಗೆ ಎರಡನೇ ಹಂತದ ಮತದಾನವು ಎ.26ರಂದು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಲ್ಲಿ ನಡೆಯಲಿದೆ. ಮತದಾನವು ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡು ಸಂಜೆ ಐದು ಗಂಟೆಗೆ ಅಂತ್ಯಗೊಳ್ಳಲಿದೆ.
ಎರಡನೇ ಹಂತದ ಮತದಾನವು ಬಿಜೆಪಿ ಮತ್ತು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಡುವೆ ಕಠಿಣ ಹೋರಾಟಕ್ಕೆ ಸಾಕ್ಷಿಯಾಗಲಿದೆ.
ಎರಡನೇ ಹಂತದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ (ವಯನಾಡ್), ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (ಇಬ್ಬರೂ ತಿರುವನಂತಪುರ), ಬಿಜೆಪಿಯ ಹೇಮಾಮಾಲಿನಿ (ಮಥುರಾ), ಕಾಂಗ್ರೆಸ್ ನ ಭೂಪೇಶ್ ಬಘೇಲ್ (ರಾಜನಂದಗಾಂವ್),ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ) ಮತ್ತು ಬಿಜೆಪಿಯ ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) ಸೇರಿದ್ದಾರೆ.
ಎರಡನೇ ಹಂತದಲ್ಲಿ ಕರ್ನಾಟಕದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ಉತ್ತರ,ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ವಯನಾಡ, ತಿರುವನಂತಪುರ, ಕಾಸರಗೋಡ್, ಕಣ್ಣೂರು, ಮಲಪ್ಪುರಂ ಸೇರಿದಂತೆ ಕೇರಳದ ಎಲ್ಲ 20 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಇನ್ನುಳಿದಂತೆ ಅಸ್ಸಾಮಿನ ಐದು, ಬಿಹಾರದ ನಾಲ್ಕು, ಛತ್ತೀಸ್ಗಡದ ಮೂರು, ಜಮ್ಮು-ಕಾಶ್ಮೀರದ ಒಂದು, ಮಣಿಪುರದ ಒಂದು, ಮಧ್ಯಪ್ರದೇಶದ ಏಳು, ಮಹಾರಾಷ್ಟ್ರದ ಒಂಭತ್ತು, ರಾಜಸ್ಥಾನದ ಹದಿಮೂರು, ತ್ರಿಪುರಾದ ಒಂದು, ಉತ್ತರ ಪ್ರದೇಶದ ಎಂಟು, ಪಶ್ಚಿಮ ಬಂಗಾಳದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎ.26ರಂದು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಎ.19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭಾ ಚುನವಣೆ ನಡೆದಿತ್ತು. ಚುನಾವಣಾ ಆಯೋಗದ ಪ್ರಕಟಣೆಯಂತೆ ಸರಾಸರಿ ಶೇ.60ರಿಂದ ಶೇ.65ರಷ್ಟು ಮತದಾನವಾಗಿತ್ತು.
ಏಳು ಹಂತಗಳ ಲೋಕಸಭಾ ಚುನಾವಣೆಯ ಇತರ ಐದು ಹಂತಗಳ ಮತದಾನ ಮೇ 7,ಮೇ 13,ಮೇ 20,ಮೇ 25 ಮತ್ತು ಜೂ.1ರಂದು ನಡೆಯಲಿದೆ. ಜೂ.4ರಂದು ಮತಗಳ ಎಣಿಕೆ ನಡೆಯಲಿದೆ.