ಬಿಸಿಲಿನ ತಾಪ: ಕೇರಳದಲ್ಲಿ ಮೂವರು ಮತದಾರರು, ಓರ್ವ ಪೋಲಿಂಗ್ ಏಜೆಂಟ್ ಸಾವು
ಪಾಲಕ್ಕಾಡ್: ಕೇರಳದಲ್ಲಿ ಶುಕ್ರವಾರ ಮತದಾನದ ವೇಳೆ ತೀವ್ರ ಉಷ್ಣದ ವಾತಾವರಣದಿಂದಾಗಿ ಪಾಲಕ್ಕಾಡ್, ಮಲಪ್ಪುರಂ ಮತ್ತು ಆಲಪ್ಪುಳದಲ್ಲಿ ಮೂವರು ಮತದಾರರು ಮತ್ತು ಕೊಝಿಕ್ಕೋಡ್‌ನಲ್ಲಿ ಓರ್ವ ಪೋಲಿಂಗ್ ಏಜೆಂಟ್ ಮೃತಪಟ್ಟಿದ್ದಾರೆ ಎಂದು onmanorama.com ವರದಿ ಮಾಡಿದೆ.
ಒಟ್ಟಪಾಲಂನ ಚುನಂಗಡ್ ಎಂಬಲ್ಲಿ ಮತದಾನ ಮಾಡಿದ ನಂತರ ವ್ಯಕ್ತಿಯೊಬ್ಬರು ಕುಸಿದು ಸಾವನ್ನಪ್ಪಿದ್ದಾರೆ. ಅವರನ್ನು ಸ್ಥಳೀಯ ನಿವಾಸಿ ಚಂದ್ರನ್ (68) ಎಂದು ಗುರುತಿಸಲಾಗಿದೆ. ಪಾಲಕ್ಕಾಡ್ ಗುರುವಾರ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿತ್ತು.
ತಿರೂರ್‌ನ ನಿರಮರತ್ತೂರು ಗ್ರಾಮ ಪಂಚಾಯತ್‌ನ ವಳ್ಳಿಕ್ಕಂಜಿರಂ ಶಾಲೆಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದ ಮೊದಲಿಗರಾಗಿದ್ದ ಮದರಸಾ ಶಿಕ್ಷಕ ಅಲಿಕ್ಕನ್ನಕ್ಕಲ್ ತರಕ್ಕಲ್ ಸಿದ್ದೀಖ್ ಮನೆಗೆ ಮರಳಿದ ತಕ್ಷಣ ಕುಸಿದು ಸಾವನ್ನಪ್ಪಿದ್ದಾರೆ.
ಆಲಪ್ಪುಳದ ಮತದಾನ ಕೇಂದ್ರವೊಂದರಲ್ಲಿ ಮತದಾನ ಮಾಡಿ ಮನೆಗೆ ವಾಪಸಾಗಿದ್ದ 82 ವರ್ಷದ ಕಕ್ಕಝಂ ವೀಲಿಪರಂಬು ಸೋಮರಾಜನ್ ಕೂಡ ಕುಸಿದು ಮೃತಪಟ್ಟಿದ್ದಾರೆ.
ಇನ್ನೊಂದು ಘಟನೆಯಲ್ಲಿ ಕೊಝಿಕ್ಕೋಡ್‌ನ ಕುಟ್ಟಿಚ್ಚರ ಮತಗಟ್ಟೆಯ ಎಲ್‌ಡಿಎಫ್ ಪೋಲಿಂಗ್ ಏಜಂಟ್, 66 ವರ್ಷದ ಮಲಿಯೆಕ್ಕಲ್ ಅನೀಸ್ ಕೂಡ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ನಿವೃತ್ತ ಕೆಎಸ್‌ಇಬಿ ಇಂಜಿನಿಯರ್ ಆಗಿದ್ದರು.