ಮಧ್ಯಪ್ರದೇಶ : ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ, ಶಾಜಾಪುರದಲ್ಲಿ ನಿಷೇಧಾಜ್ಞೆ

Update: 2024-01-09 15:30 GMT

ಸಾಂದರ್ಭಿಕ ಚಿತ್ರ

ಶಾಜಾಪುರ: ವಿವಾದದ ಬಳಿಕ ಕೆಲವು ವ್ಯಕ್ತಿಗಳು ಧಾರ್ಮಿಕ ಮೆರವಣಿಗೆಯೊಂದರಲ್ಲಿ ಭಾಗವಹಿಸಿದ್ದವರ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಶಾಜಾಪುರ ನಗರದ ಮೂರು ಪ್ರದೇಶಗಳಲ್ಲಿ ಕಲಂ 144ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಸೋಮವಾರ ಸಂಜೆ ಮಗರಿಯಾ ಪ್ರದೇಶದಲ್ಲಿ ನಡೆದಿದ್ದ ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಪ್ರದೇಶದಲ್ಲಿ ಸಾಕಷ್ಟು ಭದ್ರತೆಯನ್ನು ಏರ್ಪಡಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ. ಪರಿಸ್ಥಿತಿಯು ಈಗ ಶಾಂತಿಯುತವಾಗಿದೆ ಎಂದು ಪೋಲಿಸರು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಮುನ್ನ ಎಂದಿನಂತೆ ಸೋಮವಾರ ರಾತ್ರಿ 8:30ರ ಸುಮಾರಿಗೆ ಗುಂಪೊಂದು ಮೆರವಣಿಗೆ ನಡೆಸುತ್ತಿದ್ದಾಗ ನಾಗ-ನಾಗಿನ್ ರಸ್ತೆಯ ಮಸೀದಿಯ ಬಳಿ ಅವರನ್ನು ತಡೆದಿದ್ದ ಏಳೆಂಟು ಜನರು ಈ ಪ್ರದೇಶದಲ್ಲಿ ಮೆರವಣಿಗೆ ನಡೆಸದಂತೆ ಸೂಚಿಸಿದ್ದರು ಮತ್ತು ಅಲ್ಲಿ ಜನರ ಗುಂಪು ಸೇರಿತ್ತು. ಈ ವೇಳೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ಹಲ್ಲೆ ನಡೆಸಿ ಅವರ ಮೇಲೆ ಕಲ್ಲುಗಳನ್ನು ತೂರಲಾಗಿತ್ತು. ಗುಂಪು ಖಡ್‌ ಗಗಳಿಂದಲೂ ದಾಳಿ ನಡೆಸಿತ್ತು ಮತ್ತು ಮನೆಗಳ ಛಾವಣಿಗಳ ಮೇಲಿನಿಂದ ಕಲ್ಲುಗಳನ್ನು ತೂರಲಾಗಿತ್ತು ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮೋಹಿತ ರಾಠೋಡ್ ಎನ್ನುವವರು ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಆಧಾರದಲ್ಲಿ ಪೋಲಿಸರು 24 ಗುರುತಿಸಲಾದ ಮತ್ತು 15-20 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಘಟನೆಯ ಬಳಿಕ ಶಾಜಾಪುರ ಶಾಸಕ ಅರುಣ ಭೀಮಾವದ್ ಅವರು ಸ್ಥಳೀಯ ಪೋಲಿಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News