ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ ; ದುಬೈಯಲ್ಲಿ ಮಾಲೀಕ ರವಿ ಉಪ್ಪಳ್ ಬಂಧನ
ಹೊಸದಿಲ್ಲಿ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನ ಇಬ್ಬರು ಪ್ರಧಾನ ಮಾಲೀಕರ ಪೈಕಿ ಒಬ್ಬನಾಗಿರುವ ರವಿ ಉಪ್ಪಳ್‌ನನ್ನು ದುಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಅನುಷ್ಠಾನ ನಿರ್ದೇಶನಾಲಯದ ಕೋರಿಕೆಯಂತೆ ಇಂಟರ್‌ಪೋಲ್ ಹೊರಡಿಸಿದ ಕೆಂಪು ನೋಟಿಸ್‌ನ ಆಧಾರದಲ್ಲಿ ದುಬೈ ಪೊಲೀಸರು ಈ ಬಂಧನ ನಡೆಸಿದ್ದಾರೆ.
43 ವರ್ಷದ ಉಪ್ಪಳ್‌ನನ್ನು ದುಬೈ ಪೊಲೀಸರು ಕಳೆದ ವಾರ ಬಂಧಿಸಿದ್ದಾರೆ ಹಾಗೂ ಅವನನ್ನು ಭಾರತಕ್ಕೆ ಗಡೀಪಾರು ಮಾಡುವ ನಿಟ್ಟಿನಲ್ಲಿ ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳು ದುಬೈ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಅಕ್ರಮ ಬೆಟ್ಟಿಂಗ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಅನುಷ್ಠಾನ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಜೊತೆಗೆ, ಛತ್ತೀಸ್‌ಗಢ ಮತ್ತು ಮುಂಬೈ ಪೊಲೀಸರೂ ಈ ವಿಷಯದಲ್ಲಿ ತನಿಖೆ ಮಾಡುತ್ತಿದ್ದಾರೆ.
ಅನುಷ್ಠಾನ ನಿರ್ದೇಶನಾಲಯವು ಉಪ್ಪಳ್ ಮತ್ತು ಆ್ಯಪ್‌ನ ಇನ್ನೋರ್ವ ಮಾಲೀಕ ಸೌರಭ್ ಚಂದ್ರಾಕರ್ ವಿರುದ್ಧ ಛತ್ತೀಸ್‌ಗಢದ ರಾಯ್ಪುರದಲ್ಲಿರುವ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ (ಪಿಎಮ್‌ಎಲ್‌ಎ) ನ್ಯಾಯಾಲಯದಲ್ಲಿ ಅಕ್ಟೋಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ಬಳಿಕ, ಅನುಷ್ಠಾನ ನಿರ್ದೇಶನಾಲಯದ ಮನವಿಯ ಮೇರೆಗೆ ಇಂಟರ್‌ಪೋಲ್ ಕೆಂಪು ನೋಟಿಸ್ ಹೊರಡಿಸಿತ್ತು.