ಮಹಾರಾಷ್ಟ್ರ | ಬಿಲ್ ಮೊತ್ತ ಪಾವತಿಸುವಂತೆ ಕೇಳಿದ್ದಕ್ಕೆ ವೈಟರ್ ನನ್ನು ಅಪಹರಿಸಿ, ಹಲ್ಲೆ ನಡೆಸಿದ ರೌಡಿಗಳು!

Update: 2024-09-11 15:43 GMT

Screengrab: X \ @suman_pakad

ಬೀಡ್ (ಮಹಾರಾಷ್ಟ್ರ): ವೈಟರ್ ಒಬ್ಬರು ಗ್ರಾಹಕರ ಸೋಗಿನಲ್ಲಿದ್ದ ರೌಡಿಗಳನ್ನು ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ, ಆತನನ್ನು ಒಂದು ಕಿಮೀ ಎಳೆದೊಯ್ದಿರುವ ದುಷ್ಕರ್ಮಿಗಳು, ನಂತರ ಒತ್ತೆಯಾಳಾಗಿಸಿಕೊಂಡು ರಾತ್ರಿಯೆಲ್ಲ ಥಳಿಸಿರುವ ಘಟನೆ ಮಂಗಳವಾರ ಮಹಾರಾಷ್ಟ್ರದ ಬೀಡ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ರೆಸ್ಟೋರೆಂಟ್ ಒಂದಕ್ಕೆ ಉಪಾಹಾರ ಸೇವನೆಗೆಂದು ಬಂದಿರುವ ಮೂವರು ಯುವಕರು, ನಂತರ ಕಾರಿನಲ್ಲಿ ಕುಳಿತು ವೈಟರ್ ನೊಂದಿಗೆ ವಾಗ್ವಾದ ನಡೆಸಿದ್ದು, ಬಿಲ್ ಪಾವತಿಸಲು ನಿರಾಕರಿಸಿದ್ದಾರೆ. ಅವರು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದಾಗ, ವೈಟರ್ ಕಾರಿನ ಚಾಲಕನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಕಾರು ನಿಲ್ಲಿಸದ ಚಾಲಕನು ವೈಟರ್ ನನ್ನು ಒಂದು ಕಿಮೀ ದೂರ ಎಳೆದೊಯ್ದಿದ್ದಾನೆ ಎಂದು ಹೇಳಲಾಗಿದೆ.

ನಂತರ ಆ ವೈಟರ್ ನನ್ನು ಒತ್ತೆಯಾಳಾಗಿಸಿಕೊಂಡಿರುವ ರೌಡಿಗಳು, ಇಡೀ ರಾತ್ರಿ ಆತನಿಗೆ ಥಳಿಸಿದ್ದಾರೆ. ರೌಡಿಗಳು ವೈಟರ್ ನನ್ನು ರೆಸ್ಟೋರೆಂಟ್ ನಿಂದ ಎಳೆದೊಯ್ದಿರುವ ಸಂಪೂರ್ಣ ಘಟನೆ ರೆಸ್ಟೋರೆಂಟ್ ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರ ಪ್ರಕಾರ, ಪೊಲೀಸರ ಹೇಳಿಕೆಯ ಪ್ರಕಾರ, ಸಖರಾಮ್ ಜನಾರ್ದನ್ ಮುಂಡೆ ಎಂಬ ಹೆಸರಿನ ವ್ಯಕ್ತಿಯು ತನ್ನಿಬ್ಬರು ಗೆಳೆಯರೊಂದಿಗೆ ಉಪಾಹಾರ ಸೇವಿಸಲು ಡಾಬಾವೊಂದಕ್ಕೆ ಬಂದಿದ್ದಾನೆ. ಉಪಾಹಾರ ಸೇವನೆಯ ನಂತರ, ಅವರು ವೈಟರ್ ಶೇಖ್ ಸಾಹಿಲ್ ಅನುಸುದ್ದೀನ್ ಗೆ ಬಿಲ್ ತರುವಂತೆ ಸೂಚಿಸಿದ್ದಾರೆ. ಇದಾದ ನಂತರ, ಆ ಮೂವರೂ ಕಾರಿನಲ್ಲಿ ಕುಳಿತು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ವೈಟರ್ ಅವರನ್ನು ಹಿಡಿಯಲು ಪ್ರಯತ್ನಿಸಿದರಾದರೂ, ಕಾರಿನ ಚಾಲಕ ಆತನನ್ನು ಕಾರಿನೊಂದಿಗೆ ಎಳೆದೊಯ್ದಿದ್ದಾನೆ ಎಂದು ಹೇಳಲಾಗಿದೆ.

ಆರೋಪಿಗಳು ನನ್ನನ್ನು ಒತ್ತೆಯಾಳನ್ನಾಗಿಸಿಕೊಂಡು ಇಡೀ ರಾತ್ರಿ ಥಳಿಸಿದರು ಹಾಗೂ ನನ್ನಿಂದ ರೂ. 11,500 ಅನ್ನು ಕಸಿದುಕೊಂಡರು ಎಂದು ಸಂತ್ರಸ್ತ ವೈಟರ್ ಹೇಳಿಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ವೈಟರ್ ಶೇಖ್ ಸಾಹಿಲ್ ಅನುಸುದ್ದೀನ್ ದಾಖಲಿಸಿರುವ ದೂರನ್ನು ಆಧರಿಸಿ, ಸಖಾರಾಮ್ ಜನಾರ್ದನ್ ಮುಂಡೆ ಸೇರಿದಂತೆ ಮೂವರ ವಿರುದ್ಧ ದಿಂಡ್ರೂಡ್ ಠಾಣೆ ಪೊಲೀಸರು ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದೂ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News