ಮಹಾರಾಷ್ಟ್ರ | ನೂತನ ಸರ್ಕಾರದಲ್ಲಿ ಬಿಜೆಪಿಯ ಸಿಎಂ, ಇಬ್ಬರು ಡಿಸಿಎಂಗಳು : ಅಜಿತ್ ಪವಾರ್
ಪುಣೆ : ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಬಿಜೆಪಿಯವರಾಗಲಿದ್ದು, ಮಹಾಯುತಿ ಮೈತ್ರಿಕೂಟದ ಇತರ ಮಿತ್ರಪಕ್ಷಗಳಿಂದ ಇಬ್ಬರು ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಶನಿವಾರ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಹೇಳಿದ್ದಾರೆ.
ಇದಕ್ಕೂ ಮುನ್ನ, ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸುತ್ತಿರುವ 95 ವರ್ಷದ ಸಾಮಾಜಿಕ ಹೋರಾಟಗಾರ ಡಾ. ಬಾಬಾ ಅಧವ್ ರನ್ನು ಅಜಿತ್ ಪವಾರ್ ಭೇಟಿಯಾದರು.
ಈ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಜಿತ್ ಪವಾರ್, “ರಾಜ್ಯವು ಬಿಜೆಪಿಯಿಂದ ಓರ್ವ ಮುಖ್ಯಮಂತ್ರಿಯನ್ನು ಹೊಂದಲಿದ್ದು, ಮಹಾಯುತಿ ಮೈತ್ರಿಕೂಟದ ಇನ್ನಿತರ ಎರಡು ಮಿತ್ರಪಕ್ಷಗಳಿಂದ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಲಿದೆ. ಡಿಸೆಂಬರ್ 5ರಂದು ನೂತನ ಸರಕಾರದ ಪ್ರಮಾಣ ವಚನ ಸಮಾರಂಭ ನಡೆಯುವ ಸಂಭವವಿದೆ. ನಾವು ಬಲಿಷ್ಠ ದೂರದೃಷ್ಟಿಯೊಂದಿಗೆ ಮುನ್ನಡೆಯಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.
ಈ ನಡುವೆ, ಡಿಸೆಂಬರ್ 5ರ ಸಂಜೆ ನೂತನ ಮಹಾಯುತಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ದಕ್ಷಿಣ ಮುಂಬೈನ ಆಝಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆಯಲಿದೆ ಎಂದು ಶನಿವಾರ ಸಂಜೆ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಪ್ರಕಟಿಸಿದರು.
ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಹೊಂದಿರುವ ಮಹಾಯುತಿ ಮೈತ್ರಿಕೂಟವು ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿತ್ತು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಶಿವಸೇನೆ ಮತ್ತು ಎನ್ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳಲ್ಲಿ ಜಯ ಸಾಧಿಸಿವೆ.
ಹೀಗಿದ್ದೂ, ಸರಕಾರ ರಚನೆ ವಿಳಂಬಗೊಂಡಿದ್ದು, ಮುಖ್ಯಮಂತ್ರಿ ಆಯ್ಕೆ ಇನ್ನೂ ನಿಗೂಢವಾಗಿ ಉಳಿದಿದೆ. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದಿನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಏಕನಾಥ್ ಶಿಂದೆ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಹುದ್ದೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ.