ಮಹಾರಾಷ್ಟ್ರ ಸರಕಾರ ಮರಾಠರಿಗೆ ಮೀಸಲಾತಿ ನೀಡುವುದರ ಪರವಾಗಿದೆ: ಸರ್ವಪಕ್ಷ ಸಭೆ ಬಳಿಕ ಏಕನಾಥ ಶಿಂದೆ

Update: 2023-11-01 14:20 GMT

ಏಕನಾಥ ಶಿಂದೆ  Photo- PTI

ಮುಂಬೈ: ಮಹಾರಾಷ್ಟ್ರ ಸರಕಾರವು ಮರಾಠರಿಗೆ ಮೀಸಲಾತಿ ನೀಡುವುದಕ್ಕೆ ಪರವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ ಬುಧವಾರ ಹೇಳಿದರು.

ತೀವ್ರಗೊಳ್ಳುತ್ತಿರುವ ಮರಾಠ ಮೀಸಲಾತಿ ಚಳವಳಿಯ ಬಗ್ಗೆ ಚರ್ಚಿಸಲು ಕರೆಯಲಾಗಿರುವ ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಮುಖ್ಯಮಂತ್ರಿಯ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಾಯಕರು, ಅನಿರ್ದಿಷ್ಟಾವಧಿ ಉಪವಾಸವನ್ನು ಕೊನೆಗೊಳಿಸಬೇಕೆಂದು ಹೋರಾಟಗಾರ ಮನೋಜ್ ಜಾರಂಗೆಗೆ ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಿದರು.

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯದಲ್ಲಿ ಜಾರಂಗೆ ರಾಜ್ಯ ಸರಕಾರದೊಂದಿಗೆ ಸಹಕರಿಸಬೇಕು ಎಂದು ಶಿಂದೆ ಹೇಳಿದರು.

ಮರಾಠರು ಸಂಯಮ ವಹಿಸಬೇಕು ಎಂದು ಹೇಳಿದ ಅವರು, ಮೀಸಲಾತಿ ಜಾರಿಗಾಗಿ ಕಾನೂನು ತಿದ್ದುಪಡಿಗಳನ್ನು ತರಲು ಸರಕಾರಕ್ಕೆ ಸಮಯಾವಕಾಶದ ಅಗತ್ಯವಿದೆ ಎಂದರು.

ನಿರ್ಣಯಕ್ಕೆ ಮುಖ್ಯಮಂತ್ರಿ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಅನಿಲ್ ಪರಬ್, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ವಿಜಯ ವಡೆಟ್ಟಿವರ್, ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಅಂಬಾದಾಸ್ ದಾನ್ವೆ ಮುಂತಾದವರು ಸಹಿ ಹಾಕಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಮುಖ್ಯಸ್ಥ ಉದ್ಧವ್ ಠಾಕ್ರೆ ಗೈರು ಹಾಜರಾಗಿದ್ದು ಗಮನ ಸೆಳೆಯಿತು.

ಸಚಿವ ಹಸನ್ ಮುಶ್ರಿಫ್‌ ಕಾರು ಧ್ವಂಸಗೊಳಿಸಿದ ಮರಾಠ ಮೀಸಲಾತಿ ಹೋರಾಟಗಾರರು (w f)

ಮುಂಬೈ: ಮರಾಠ ಮೀಸಲಾತಿಗಾಗಿ ಧರಣಿ ನಡೆಸುತ್ತಿರುವ ಹೋರಾಟಗಾರರು ಬುಧವಾರ ಮುಂಬೈಯಲ್ಲಿ ಮಹಾರಾಷ್ಟ್ರದ ಸಚಿವ ಹಸನ್ ಮುಶ್ರಿಫ್‌ಗೆ ಸೇರಿದ ಕಾರನ್ನು ಧ್ವಂಸಗೊಳಿಸಿದರು.

ದಕ್ಷಿಣ ಮುಂಬೈಯಲ್ಲಿ ಮುಂಜಾನೆ ಈ ಘಟನೆ ನಡೆದಿದೆ. ಬಳಿಕ ಮರೀನ್ ಡ್ರೈವ್ ಪೊಲೀಸರು ಮೂವರು ವ್ಯಕ್ತಿಗಳನ್ನು ಘಟನೆಯ ಸಂಬಂಧ ಬಂಧಿಸಿದರು ಎಂದು ಮದ್ಯಹಮಗಳು ವರದಿ ಮಾಡಿವೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಬಣಕ್ಕೆ ಸೇರಿದ ಹಸನ್ ಮುಶ್ರಿಫ್‌ರ ನಿಲ್ಲಿಸಲಾಗಿದ್ದ ಕಾರನ್ನು ಬೆಳಗ್ಗೆ ಸುಮಾರು 7:30ರ ಹೊತ್ತಿಗೆ ಇಬ್ಬರು ಮರಾಠ ಮೀಸಲಾತಿ ಹೋರಾಟಗಾರರು ದೊಣ್ಣೆಗಳಿಂದ ಬಡಿದು ಧ್ವಂಸಗೊಳಿಸಿದರು ಎಂದು ಪೊಲೀಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News