ಮಹಾರಾಷ್ಟ್ರ | ನನಗೆ ಮತ ನೀಡದಿದ್ದರೆ, ‘ಲಡ್ಕಿ ಬಹಿನ್’ ನಿಧಿಯನ್ನುಸ್ಥಗಿತಗೊಳಿಸಲಾಗುವುದು : ಮಹಿಳೆಯರನ್ನು ಬೆದರಿಸಿದ ಶಾಸಕ ರವಿ ರಾಣಾ

Update: 2024-08-13 13:28 GMT

ಶಾಸಕ ರವಿ | PC : PTI

ಮುಂಬೈ : ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೇನಾದರೂ ಮತ ಚಲಾಯಿಸದಿದ್ದರೆ, ‘ಲಡ್ಕಿ ಬಹಿನ್’ ಯೋಜನೆಯಡಿ ವಿತರಿಸಲಾಗಿರುವ ಆರ್ಥಿಕ ನೆರವನ್ನು ಹಿಂಪಡೆಯುವುದಾಗಿ ಅಮರಾವತಿ ಜಿಲ್ಲೆಯ ಬದ್ನೇರಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ರವಿ ರಾಣಾ ಮಹಿಳೆಯರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಅಮರಾವತಿಯಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಹಾಯುತಿ ಸರಕಾರದ ಸಹ ಸದಸ್ಯರಾದ ರವಿ ರಾಣಾ ಈ ಹೇಳಿಕೆ ನೀಡಿದ್ದರು. ಆದರೆ, ವಿರೋಧ ಪಕ್ಷಗಳು ಈ ಹೇಳಿಕೆಯ ವಿರುದ್ಧ ಹರಿಹಾಯ್ದ ನಂತರ, ನಾನದನ್ನು ತಮಾಷೆಗಾಗಿ ಹೇಳಿದ್ದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಏಕನಾಥ ಶಿಂದೆ ನೇತೃತ್ವದ ಸರಕಾರದ ಮಹತ್ವದ ಯೋಜನೆಯಾದ ‘ಮುಖ್ಯಮಂತ್ರಿ ಮಝಿ ಲಡ್ಕಿ ಬಹಿನ್ ಯೋಜನೆ’ ಯಡಿ ಪ್ರತಿ ಅರ್ಹ ಮಹಿಳೆಯರಿಗೆ ಮಾಸಿಕ ರೂ. 1,500 ಆರ್ಥಿಕ ನೆರವು ಒದಗಿಸಲಾಗುತ್ತಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಣಾ, “ನಾನು ಮಾಸಿಕ ನೀಡಲಾಗುವ ರೂ. 1,500 ಮೊತ್ತದ ಬದಲು ರೂ. 3,000 ನೀಡುವಂತೆ ಮನವಿ ಮಾಡುತ್ತೇನೆ. ನಾನು ನಿಮ್ಮ ಸಹೋದರ. ಆದರೆ, ನೀವೇನಾದರೂ ನನಗೆ ಆಶೀರ್ವದಿಸದಿದ್ದರೆ, ನಾನು ನಿಮ್ಮ ಬ್ಯಾಂಕ್ ಖಾತೆಗಳಿಂದ ರೂ. 1,500 ಅನ್ನು ವಾಪಸ್ ಪಡೆಯುತ್ತೇನೆ” ಎಂದು ಮಹಿಳೆಯರಿಗೆ ಬೆದರಿಕೆ ಒಡ್ಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ವಿಪಕ್ಷ ನಾಯಕ ವಿಜಯ್ ವಡೆಟ್ಟಿಕರ್, ಈ ಯೋಜನೆಯಡಿ ವಿತರಿಸಲಾಗುತ್ತಿರುವ ಹಣವೇನಾದರೂ ರಾಣಾ, ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಗಳಿಗೆ ಸೇರಿದೆಯೆ? ಎಂದು ವಾಗ್ದಾಳಿ ನಡೆಸಿದ್ದಾರೆ.

“ಚುನಾವಣೆಯ ಮೇಲೆ ಕಣ್ಣಿಟ್ಟು ಈ ಯೋಜನೆಯನ್ನು ಪ್ರಕಟಿಸಲಾಗಿದೆ ಎಂಬುದು ಸಾಬೀತಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರಕಾರವು ಮೊದಲೆರಡು ತಿಂಗಳುಗಳ (ಜುಲೈ ಮತ್ತು ಆಗಸ್ಟ್) ಕಂತುಗಳನ್ನು ಫಲಾನುಭವಿಗಳ ಖಾತೆಗಳಿಗೆ ಆಗಸ್ಟ್ 17ರಂದು ಜಮೆ ಮಾಡಲಿದೆ. ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News