ಮಹಾರಾಷ್ಟ್ರ: ಜ್ಯೋತಿಬಾ ಫುಲೆ, ಸಾಯಿಬಾಬಗೆ ನಿಂದನೆ; ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧ ಎಫ್‌ಐಆರ್ ದಾಖಲು

Update: 2023-08-02 16:48 GMT

Photo : ಸಂಭಾಜಿ ಭಿಡೆ | NDTV 

ಮುಂಬೈ: ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿರ್ಡಿ ಸಾಯಿಬಾಬಾ ಹಾಗೂ ಸಾಮಾಜಿಕ ಸುಧಾರಕ ಜ್ಯೋತಿಬಾ ಫುಲೆ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಬಲಪಂಥೀಯ ನಾಯಕ ಸಂಭಾಜಿ ಭಿಡೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನಾಸಿಕ್ ಮೂಲದ ಸಾಮಾಜಿಕ ಸಂಘಟನೆಯೊಂದರ ಅಧ್ಯಕ್ಷ ನೀಡಿದ ದೂರಿನ ಆಧಾರದಲ್ಲಿ ಆಗಸ್ಟ್ 1ರಂದು ಪ್ರಕರಣ ದಾಖಲಿಸಲಾಗಿದೆ. ಅನಂತರ ಪೊಲೀಸರು ಎಫ್‌ಐಆರ್ ಅನ್ನು ಭಿಡೆ ಹೇಳಿಕೆ ನೀಡಿದ ಅಮರಾವತಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

ತನ್ನ ಭಾಷಣದಲ್ಲಿ ಮಹಾತ್ಮಾ ಗಾಂಧಿ ಕುರಿತು ಮಾನ ಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಭಿಡೆ ವಿರುದ್ಧ ಕಳೆದ ವಾರ ಅಮರಾವತಿ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಿಸಲಾಗಿದೆ.

ನಾಸಿಕ್ ಪೊಲೀಸರು ಭಿಡೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295, 153ಎ, 298 ಅಡಿಯಲ್ಲಿ ಹಾಗೂ ಮಾನ ಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಜುಲೈ 30ರಂದು ಅಮರಾವತಿ ನಗರದ ರಾಜಪೀಠ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಭಾಜಿ ಭಿಡೆ ಅವರು ಮಹಾತ್ಮಾ ಫುಲೆ, ರಾಜಾ ರಾಮ್‌ಮೋಹನ್ ರಾಯ್ ಹಾಗೂ ಸಾಯಿಬಾಬಾ ಅವರನ್ನು ಅವಮಾನಿಸುವ ಉದ್ದೇಶದಿಂದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫುಲೆ ಹಾಗೂ ಸಾಯಿಬಾಬಾ ವಿರುದ್ಧ ಭಿಡೆ ನಿಂದನಾತ್ಮಕ ಹಾಗೂ ಕೆಟ್ಟ ಭಾಷೆ ಬಳಸಿದ್ದಾರೆ’’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News