ಮಹುವಾ ಮೊಯಿತ್ರಾ ಪ್ರಕರಣ| ಸಂಸದೀಯ ಸಮಿತಿಯ ತನಿಖೆ ಬಳಿಕ ಸೂಕ್ತ ಕ್ರಮ: ಟಿಎಂಸಿ ನಾಯಕ ಡೆರೆಕ್‌ ಓಬ್ರಿಯಾನ್

Update: 2023-10-22 17:28 GMT

Photo- PTI

ಹೊಸದಿಲ್ಲಿ: ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯು ತನಿಖೆಯನ್ನು ಪೂರ್ಣಗೊಳಿಸಿದ ನಂತರ ಪಕ್ಷವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ತೃಣಮೂಲದ ರಾಜ್ಯಸಭಾ ನಾಯಕ ಡೆರೆಕ್ ಒ'ಬ್ರಿಯಾನ್ ಹೇಳಿದ್ದಾರೆ.

ಮೊಯಿತ್ರಾ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ಮೌನವಾಗಿರುವುದನ್ನು ಪ್ರಶ್ನಿಸಿ, ಟಿಎಂಸಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿರುವ ನಡುವೆ ಓ'ಬ್ರಿಯಾನ್ ಅವರು ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ದುಬಾರಿ ಉಡುಗೊರೆಗಳನ್ನು ಪಡೆದಿರುವ ಆರೋಪವನ್ನು ಮೊಯಿತ್ರಾ ವಿರುದ್ಧ ಹೊರಿಸಲಾಗಿದೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಮೊಯಿತ್ರಾ ಅವರು ಉದ್ಯಮಿಯಿಂದ ಲಂಚ ಪಡೆದಿದ್ದಾರೆ. ಹಾಗೂ ಅವರ ಸಂಸತ್ತಿನ ಲಾಗಿನ್ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಪತ್ರದಲ್ಲಿ ಕೋರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೆರೆಕ್‌ ಓʼಬ್ರಿಯಾನ್‌, ತಮ್ಮ ಪಕ್ಷವು ಮಾಧ್ಯಮಗಳಲ್ಲಿ ವರದಿಗಳನ್ನು ಗಮನಿಸಿದೆ ಎಂದು ಹೇಳಿದರು.

"ತಮ್ಮ ವಿರುದ್ಧ ಹೊರಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಪಕ್ಷದ ನಾಯಕತ್ವದಿಂದ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದೆ. ಅವರು ಈಗಾಗಲೇ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಈ ವಿಷಯವು ಚುನಾಯಿತ ಸಂಸದ ಸದಸ್ಯರ ಹಕ್ಕುಗಳು ಮತ್ತು ಸವಲತ್ತುಗಳಿಗೆ ಸಂಬಂಧಿಸಿರುವುದರಿಂದ ಸಂಸತ್ತಿನ ಸಮಿತಿಯಿಂದ ತನಿಖೆ ನಡೆಸಲಾಗುತ್ತಿದ್ದು, ನಂತರ ಪಕ್ಷದ ನಾಯಕತ್ವವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಅವರು ಪಿಟಿಐಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News