ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಹಂಚಿಕೊಂಡ ಮಲಯಾಳಂ ನಟರು, ನಿರ್ದೇಶಕರು

Update: 2024-01-22 09:22 GMT

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಸೋಮವಾರ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಮಲಯಾಳಂ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಭಾರತೀಯ ಸಂವಿಧಾನದ ಪೀಠಿಕೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಈ ನಡೆಯು ಭಾರತೀಯ ಜನತಾ ಪಾರ್ಟಿಯು ತನ್ನ ಅತ್ಯಂತ ಕಠಿಣ ಹಿಂದುತ್ವ ಭರವಸೆಗಳಲ್ಲೊಂದನ್ನು ಈಡೇರಿಸಿದೆ ಎಂದು ಭಾವಿಸಲಾಗಿರುವ ದಿನದಂದು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಜಾತ್ಯತೀತ,ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನೆನಪಿಸಿದೆ ಎಂದು thenewsminute.com ವರದಿ ಮಾಡಿದೆ.

ತಾರೆಯರಾದ ಪಾರ್ವತಿ ತಿರುವೋತು, ರೀಮಾ ಕಳ್ಳಿಂಗಲ್, ದಿವ್ಯಪ್ರಭಾ, ರಾಜೇಶ್ ಮಾಧವನ್ ಮತ್ತು ಕನಿ ಕುಸೃತಿ, ನಿರ್ದೇಶಕರಾದ ಜಿಯೋ ಬೇಬಿ, ಆಶಿಕ್ ಅಬು, ಕಮಾಲ್ ಕೆ.ಎಂ. ಮತ್ತು ಕುಂಜಿಲ ಮಸಿಲಮಣಿ, ಗಾಯಕ ಸೂರಜ್ ಸಂತೋಷ್ ಸೇರಿದಂತೆ ಮಲಯಾಳಂ ಚಿತ್ರರಂಗದ ಹಲವಾರು ಖ್ಯಾತನಾಮರು ಸಂವಿಧಾನ ಪೀಠಿಕೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

‘ನಾವು ಭಾರತದ ಜನರು,ಭಾರತವನ್ನು ಸಾರ್ವಭೌಮ, ಸಮಾಜವಾದಿ,ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು;ಭಾರತದ ಎಲ್ಲ ಪ್ರಜೆಗಳಿಗೆ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯ;ಚಿಂತನೆ, ಅಭಿವ್ಯಕ್ತಿ, ನಂಬಿಕೆ,ಧರ್ಮ ಮತ್ತು ಆರಾಧನೆಯ ಸ್ವಾತಂತ್ರ್ಯ;ಸ್ಥಾನಮಾನ ಮತ್ತು ಅವಕಾಶದ ಸಮಾನತೆ ಹಾಗೂ ಅದನ್ನು ಎಲ್ಲರಲ್ಲಿ ಉತ್ತೇಜಿಸಲು;ವ್ಯಕ್ತಿಯ ಘನತೆ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಖಾತರಿ ಪಡಿಸುವ ಭ್ರಾತೃತ್ವವನ್ನು ಅದರ ಎಲ್ಲ ಪ್ರಜೆಗಳಿಗೆ ಖಚಿತಪಡಿಸಲು ದೃಢಸಂಕಲ್ಪವನ್ನು ಮಾಡಿದ್ದೇವೆ.

1949ರ ನವಂಬರ್ 26ನೇ ದಿನವಾದ ಇಂದು ನಮ್ಮ ಸಂವಿಧಾನ ಸಭೆಯಲ್ಲಿ ನಾವು ಈ ಸಂವಿಧಾನವನ್ನು ಅಳವಡಿಸಿಕೊಂಡು,ಜಾರಿಗೊಳಿಸಿ,ನಮಗಾಗಿ ಅರ್ಪಿಸಿಕೊಳ್ಳುತ್ತಿದ್ದೇವೆ ’ಎಂದು ಸಂವಿಧಾನದ ಪೀಠಿಕೆಯು ಹೇಳುತ್ತದೆ.

ಸೋಮವಾರ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಯಜಮಾನರಾಗಿ ಉಪಸ್ಥಿತರಿದ್ದರು. ಸಂತರು ಮತ್ತು ಗಣ್ಯರು ಸೇರಿದಂತೆ 7,000ಕ್ಕೂ ಅಧಿಕ ಜನರು ಈ ಕ್ಷಣಕ್ಕೆ ಸಾಕ್ಷಿಗಳಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News