ಮಧ್ಯಪ್ರದೇಶದಲ್ಲಿ ಪಿಎಮ್ಎವೈ ಯೋಜನೆಯ ಜಾರಿಯಲ್ಲಿ ಅವ್ಯವಹಾರ ; ಸಿಎಜಿ ವರದಿಯಲ್ಲಿ ಬಹಿರಂಗ

Update: 2024-02-21 15:06 GMT

Photo: wisdomproperties.com

ಹೊಸದಿಲ್ಲಿ : ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ (ಪಿಎಮ್ಎವೈ-ಜಿ)ದ ಅನುಷ್ಠಾನದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಭಾರತೀಯ ಮಹಾ ಲೆಕ್ಕ ಪರಿಶೋಧಕ (ಸಿಎಜಿ)ರು ಬೆಟ್ಟು ಮಾಡಿದ್ದಾರೆ.

ರಾಜ್ಯ ಸರಕಾರವು 1,500ಕ್ಕೂ ಅಧಿಕ ಅನರ್ಹ ಫಲಾನುಭವಿಗಳಿಗೆ ಸುಮಾರು 15 ಕೋಟಿ ರೂಪಾಯಿ ನೀಡಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೆಚ್ಚು ವಂಚಿತ ಜನರ ಬದಲಿಗೆ ಉತ್ತಮ ಸ್ಥಿತಿಯಲ್ಲಿರುವ 8,000ಕ್ಕೂ ಅಧಿಕ ಫಲಾನುಭವಿಗಳಿಗೆ ಆದ್ಯತೆ ನೀಡಲಾಗಿದೆ- ಎನ್ನುವುದೂ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿವೆ.

ಪ್ರಧಾನ ಮಂತ್ರಿ ಆವಾಸ ಯೋಜನೆಯನ್ನು ಕೇಂದ್ರ ಸರಕಾರವು ಬಡತನ ನಿವಾರಣೆಯ ಸಾಧನವಾಗಿ 2016ರಲ್ಲಿ ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ಮತ್ತು ಮುರುಕು ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಮೂಲ ಸೌಕರ್ಯಗಳುಳ್ಳ ಪಕ್ಕಾ ಮನೆಗಳನ್ನು 2022ರ ವೇಳೆಗೆ ಒದಗಿಸುವ ಘೋಷಣೆಯೊಂದಿಗೆ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಮಧ್ಯಪ್ರದೇಶ ವಿಧಾನಸಭೆಯಲ್ಲಿ ಫೆಬ್ರವರಿ 8ರಂದು ಮಂಡಿಸಲಾದ ಸಿಎಜಿ ವರದಿಯು, 2016-21ರ ಅವಧಿಯಲ್ಲಿ ನಡೆದ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಿದೆ. ಈ ಅವಧಿಯಲ್ಲಿ 26,28,525 ಮನೆಗಳನ್ನು ಮಂಜೂರು ಮಾಡಲಾಗಿತ್ತು ಮತ್ತು 24,723 ಕೋಟಿ ರೂ. ಮೊತ್ತವನ್ನು ಫಲಾನುಭವಿಗಳಿಗೆ ನೀಡಲಾಗಿತ್ತು. ಮಂಜೂರುಗೊಂಡ ಮನೆಗಳ ಪೈಕಿ, 82.35 ಶೇಕಡ ಮನೆಗಳು ಸಂಪೂರ್ಣಗೊಂಡಿವೆ ಎಂದು ಸಿಎಜಿ ವರದಿ ಹೇಳುತ್ತದೆ.

ಒಂದು ವಾಹನ ಅಥವಾ ಮೀನುಗಾರಿಕಾ ದೋಣಿ ಹೊಂದಿರುವ ಮನೆಗಳನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಯೋಜನೆ ಹೇಳುತ್ತದಾದರೂ, ‘‘ಪರಿಶೋಧನೆಗೆ ಒಳಗಾದ 10 ಜಿಲ್ಲೆಗಳಲ್ಲಿ, ದ್ವಿಚಕ್ರ, ತ್ರಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ಹೊಂದಿರುವ 2,037 ಕುಟುಂಬಗಳಿಗೆ ಯೋಜನೆಯ ಪ್ರಯೋಜನವನ್ನು ನೀಡಲಾಗಿದೆ’’ ಎಂದು ಸಿಎಜಿ ವರದಿ ಹೇಳುತ್ತದೆ.

‘‘ಅದೂ ಅಲ್ಲದೆ, 2,037 ಅನರ್ಹ ಫಲಾನುಭವಿಗಳ ಪೈಕಿ 1,555 ಮಂದಿಗೆ ಈ ಯೋಜನೆಯಲ್ಲಿ 15.66 ಕೋಟಿ ರೂ. ನೆರವು ನೀಡಲಾಗಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ’’ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News