ಮಾತುಕತೆಗೆ ಕಿರಿಯ ವಿದ್ಯಾರ್ಥಿಗಳಿಗೆ ಕೊನೆಯ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ

Update: 2024-09-16 08:54 GMT

Photo: PTI

ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ 31 ವರ್ಷದ ತರಬೇತಿ ನಿರತ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ಮುಷ್ಕರ ಹೂಡಿರುವ ಕಿರಿಯ ವಿದ್ಯಾರ್ಥಿಗಳಿಗೆ ಮಾತುಕತೆ ನಡೆಸಲು ಐದನೆ ಮತ್ತು ಕೊನೆಯ ಅವಕಾಶ ನೀಡುತ್ತಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿನಿಯ ಅಮಾನುಷ ಹತ್ಯೆಗೆ ಪ್ರತಿಯಾಗಿ ನ್ಯಾಯ ದೊರೆಯುವವರೆಗೂ ಹಾಗೂ ಕೆಲವು ಹಿರಿಯ ಅಧಿಕಾರಿಗಳನ್ನು ಅವರ ಹುದ್ದೆಗಳಿಂದ ವರ್ಗಾಯಿಸುವವರೆಗೂ ನಾವು ಕರ್ತವ್ಯಕ್ಕೆ ಮರಳುವುದಿಲ್ಲ ಎಂದು ಕಿರಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಪ್ರತಿಭಟನಾನಿರತ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸರಕಾರದ ನಡುವೆ ನಡೆದಿದ್ದ ಮಾತುಕತೆಗಳು ಹಲವು ವಿಷಯಗಳ ಕುರಿತ ಅಸಮ್ಮತಿಯಿಂದಾಗಿ ಮುರಿದು ಬಿದ್ದಿದ್ದವು. ಮುಖ್ಯವಾಗಿ ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂಬ ಬೇಡಿಕೆ ಕುರಿತಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮ್ಮತಿ ವ್ಯಕ್ತಪಡಿಸಿದ್ದರು.

ಐದನೆಯ ಬಾರಿ ಮಾತುಕತೆಗೆ ಕಿರಿಯ ವೈದ್ಯರನ್ನು ಆಹ್ವಾನಿಸಿ ಇಮೇಲ್ ಮಾಡಿರುವ ಸರಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್, ಸುಪ್ರೀಂ ಕೋರ್ಟ್ ನ ಸೆಪ್ಟೆಂಬರ್ 9ರ ನಿರ್ದೇಶನದನ್ವಯ ಪ್ರತಿಭಟನಾನಿರತ ವೈದ್ಯರು ತಮ್ಮ ಕರ್ತವ್ಯಗಳಿಗೆ ಮರಳಬೇಕು ಎಂದು ತಾಕೀತು ಮಾಡಿದ್ದಾರೆ.

“ಇದು ಐದನೆಯ ಮತ್ತು ಕೊನೆಯ ಬಾರಿ ನಾವು ನಿಮ್ಮನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆಗಾಗಿ ಆಹ್ವಾನಿಸುತ್ತಿದ್ದೇವೆ. ಈ ಹಿಂದೆ ನಡೆದ ಸಭೆಯ ಅನುಸಾರವಾಗಿ ನಾವು ಮತ್ತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸವಾದ ಕಾಳಿಘಾಟ್ ನಲ್ಲಿ ಮುಕ್ತ ಮನಸ್ಸಿನೊಂದಿಗೆ ಮಾತುಕತೆಗೆ ಆಹ್ವಾನಿಸುತ್ತಿದ್ದೇವೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಇದಕ್ಕೂ ಮುನ್ನ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರತಿಭಟನಾನಿರತ ಕಿರಿಯ ವೈದ್ಯರ ನಡುವೆ ಆಯೋಜನೆಗೊಂಡಿದ್ದ ಮಾತುಕತೆಗಳು ನಾಟಕೀಯವಾಗಿ ಮುರಿದು ಬಿದ್ದಿದ್ದವು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಲು ಪ್ರತಿಭಟನಾನಿರತ ಕಿರಿಯ ವೈದ್ಯರು ಅವರನ್ನು ಭೇಟಿಯಾಗಲು ರಾಜ್ಯ ಕಾರ್ಯಾಲಯ ನಬನ್ನಾಗೆ ತೆರಳಿದ್ದರಾದರೂ, ಮಾತುಕತೆಯ ನೇರ ಪ್ರಸಾರ ಸಾಧ್ಯುವಿಲ್ಲ ಎಂದು ಮಮತಾ ಬ್ಯಾನರ್ಜಿ ಪಟ್ಟು ಹಿಡಿದಿದ್ದರಿಂದ, ಆ ಮಾತುಕತೆ ಮುರಿದು ಬಿದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News