ಮಹಾರಾಷ್ಟ್ರ | ಪತ್ನಿಯನ್ನು ಗದರಿದ್ದಕ್ಕೆ ಅಣ್ಣನನ್ನೇ ಥಳಿಸಿ ಕೊಂದ ತಮ್ಮ
ನಾಗ್ಪುರ : ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ 25 ವರ್ಷದ ಯುವಕನೊಬ್ಬ ತನ್ನ ಅಣ್ಣನನ್ನು ಥಳಿಸಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹಿಂಗ್ನಾ ಪ್ರದೇಶದಲ್ಲಿ ರವಿವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ತನ್ನ ಪತ್ನಿಯನ್ನು ಗದರಿದ್ದಕ್ಕೆ ತೀವ್ರ ವಾಗ್ವಾದದ ನಂತರ ಗೋವಿಂದ್ ಚೌಕೆ ತನ್ನ 36 ವರ್ಷದ ಸಹೋದರ ಕಿಸನ್ ಮೇಲೆ ಹಲ್ಲೆ ನಡೆಸಿದ್ದಾನೆ. ಸಹೋದರರು ತಮ್ಮ ತಾಯಿಯೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
"ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ಕಿಸನ್, ಗೋವಿಂದ್ ನ ಪತ್ನಿಯನ್ನು ನಿಂದಿಸಿದ ನಂತರ ಸಹೋದರರ ನಡುವೆ ವಾಗ್ವಾದವು ಪ್ರಾರಂಭವಾಯಿತು. ಕಿಸನ್ ಮೇಲೆ ಕೋಪಗೊಂಡ ಗೋವಿಂದ್, ಕಿಸನ್ ರ ಎದೆ ಮತ್ತು ತಲೆಗೆ ಹಲವಾರು ಬಾರಿ ಥಳಿಸಿದ. ಗಂಭೀರವಾಗಿ ಗಾಯಗೊಂಡ ಕಿಸನ್ರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು” ಎಂದು ಹಿಂಗ್ನಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಬುಧವಾರದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಿಸನ್ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಪೊಲೀಸರು ಗೋವಿಂದ್ ನನ್ನು ವಿಚಾರಣೆಗೊಳಪಡಿಸಿದ್ದು, ತಾನು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನನ್ನುಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.