ಮಹಾರಾಷ್ಟ್ರ: ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದ ಕೊಲೆ ಆರೋಪಿಯಿಂದ ಬಾಲಕಿಯ ಅತ್ಯಾಚಾರ

Update: 2024-08-24 17:19 GMT

ಸಾಂದರ್ಭಿಕ ಚಿತ್ರ

ಮುಂಬೈ: ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ ಕೊಲೆ ಆರೋಪಿಯೊಬ್ಬ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಸಂಜಯ್ ಪ್ರಕಾಶ್ ಮಾನೆ (34) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2011ರಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾನೆ ಎರಡು ತಿಂಗಳ ಹಿಂದೆ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 9.30 ಗಂಟೆಗೆ ಅಂಗಡಿಗೆ ಹೋಗಲೆಂದು ಸಂತ್ರಸ್ತ ಬಾಲಕಿಯ ಮನೆಯಿಂದ ಹೊರಗೆ ಬಂದಾಗ, ಆಕೆಯನ್ನು ದಾರಿಯಲ್ಲಿ ಅಡ್ಡಗಟ್ಟಿರುವ ಆರೋಪಿಯು, ಆಕೆಯನ್ನು ಬಲವಂತವಾಗಿ ತನ್ನ ಮನೆಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಶನಿವಾರ ಸಂತ್ರಸ್ತ ಬಾಲಕಿಯು ಮಾಹಿತಿ ನೀಡಿದ್ದು, ಇದರ ಬೆನ್ನಿಗೇ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎರಡು ಗಂಟೆಗಳೊಳಗೆ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ತಿಂಗಳೂ ಕೂಡಾ ಆ ಬಾಲಕಿಗೆ ಮಾನೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಅವರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೂಕ್ತ ಸೆಕ್ಷನ್ ಗಳು ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News