ಮಣಿಪುರ ಸಿಎಂ ಎನ್ ಬೀರೇನ್ ಸಿಂಗ್ ರ ʼರಾಜಕೀಯ ಮಹತ್ವಾಕಾಂಕ್ಷೆʼ ಜನಾಂಗೀಯ ಘರ್ಷಣೆಗಳಿಗೆ ಕಾರಣ: ಅಸ್ಸಾಂ ರೈಫಲ್ಸ್ ವರದಿ

Update: 2024-04-16 10:26 GMT

ಎನ್.ಬೀರೇನ್ ಸಿಂಗ್ | PC : PTI 

ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರ ‘ರಾಜಕೀಯ ನಿರಂಕುಶಾಧಿಕಾರ ಮತ್ತು ಮಹತ್ವಾಕಾಂಕ್ಷೆ ’ ಕಾರಣ ಎಂದು ಅಸ್ಸಾಂ ರೈಫಲ್ಸ್ ನ ವರದಿಯು ಬಹಿರಂಗಗೊಳಿಸಿದೆ.

ವಿವಿಧ ವಿಷಯಗಳ ಕುರಿತು ಬಿಜೆಪಿ ನೇತೃತ್ವದ ಸರಕಾರದ ನಿಲುವು ಸಂಘರ್ಷವನ್ನು ಉಲ್ಬಣಗೊಳಿಸಿದೆ ಮತ್ತು ರಾಜ್ಯದಲ್ಲಿ ಸಮುದಾಯಗಳ ನಡುವೆ ವಿಭಜನೆಯನ್ನುಂಟು ಮಾಡಿದೆ ಎಂದು ಸುದ್ದಿ ಜಾಲತಾಣ The Reporters’ Collective ಮತ್ತು Al Jazeera ತನ್ನ ವರದಿಯಲ್ಲಿ ಹೇಳಿದೆ.

ಮಣಿಪುರದಲ್ಲಿಯ ಸ್ಥಿತಿಯನ್ನು ‘ಬಿಜೆಪಿ ಸೃಷ್ಟಿಸಿರುವ ಬಿಕ್ಕಟ್ಟು’ ಎಂದು ಬಣ್ಣಿಸಿರುವ ಕಾಂಗ್ರೆಸ್ ಪಕ್ಷವು,ಪ್ರಧಾನಿ ನರೇಂದ್ರ ಮೋದಿಯವರು ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಗಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ಮಣಿಪುರದಲ್ಲಿಯ ಅಸ್ಸಾಂ ರೈಫಲ್ಸ್ ನ ಅಧಿಕಾರಿಗಳು ಸಿದ್ಧಪಡಿಸಿರುವ ವರದಿಯು ರಾಜ್ಯ ಸರಕಾರದ ಮೇಲೆ ಭಾಗಶಃ ಆರೋಪವನ್ನು ಹೊರಿಸಿದೆ.

ಹಲವಾರು ನೀತಿಗಳು ಬೀರೇನ್ ಸಿಂಗ್ ಕುಕಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಭಾವನೆಯನ್ನು ಮೂಡಿಸಿವೆ ಎಂದು ವರದಿಯನ್ನು ನೋಡಿರುವ ‘ರಿಪೋಟರ್ಸ್ ಕಲೆಕ್ಟಿವ್’ ಅನ್ನು ಉಲ್ಲೇಖಿಸಿ ಅಲ್ ಜಝೀರಾ ಒತ್ತಿ ಹೇಳಿದೆ. ಘರ್ಷಣೆಗಳಿಗೆ ‘ರಾಜ್ಯ ಪಡೆಗಳ ಮೌನ ಬೆಂಬಲ’ ವನ್ನು ಹಾಗೂ ‘ಕಾನೂನು ಮತ್ತು ಸುವ್ಯವಸ್ಥೆ ಯಂತ್ರ’ದ ನಿಷ್ಕ್ರಿಯತೆಯನ್ನೂ ವರದಿಯು ಗಮನಿಸಿದೆ.

ನೆರೆಯ ಮ್ಯಾನ್ಮಾರ್ ನಿಂದ ಅನಧಿಕೃತ ವಲಸೆ ಸಮಸ್ಯೆ ಮತ್ತು ಕುಕಿಲ್ಯಾಂಡ್ ಸೃಷ್ಟಿಗಾಗಿ ಬೇಡಿಕೆಗಳು ಪುನಃಶ್ಚೇತನಗೊಂಡಿರುವುದನ್ನೂ ವರದಿಯು ವಿವರಿಸಿದೆ. ಮೈತೈ ಸಮುದಾಯದ ಸಂಘಟನೆಗಳಾದ ‘ಮೈತೈ ಲೀಪನ್’ ಮತ್ತು ’ಅರಂಬೈ ತೆಂಗೋಲ್’ ಸಂಘರ್ಷವನ್ನು ಉತ್ತೇಜಿಸಿದ್ದವು ಎಂದೂ ವರದಿಯು ಉಲ್ಲೇಖಿಸಿದೆ.

ತಮ್ಮ ಜನರ ವಿರುದ್ಧ ಮೈತೈ ನೇತೃತ್ವದ ದಾಳಿಗಳ ಮುಂಚೂಣಿಯಲ್ಲಿ ಇವೆರಡು ಸಂಘಟನೆಗಳಿವೆ ಎಂದು ಕುಕಿ ನಾಯಕರು ಆರೋಪಿಸಿದ್ದಾರೆ. ತುಲನಾತ್ಮಕವಾಗಿ ಹೊಸದಾಗಿರುವ ಮೈತೆಯಿ ಲೀಪನ್ ಗುಂಪು ಆರೆಸ್ಸೆಸ್ ಸಿದ್ಧಾಂತದಿಂದ ಪ್ರಭಾವಿತಗೊಂಡಿದೆ ಮತ್ತು ಸ್ವತಃ ಮೈತೆಯಿಯಾಗಿರುವ ಬೀರೇನ್ ಸಿಂಗ್ ಸರಕಾರಕ್ಕೆ ಪದೇ ಪದೇ ಬೆಂಬಲವನ್ನು ಪ್ರಕಟಿಸಿದೆ.

ಈ ನಡುವೆ ಅರಂಬೈ ತೆಂಗೋಲ್ ನಾಗಾ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡಿದೆ ಎಂದೂ ಆರೋಪಿಸಲಾಗಿದೆ. ಜೂನ್ 2023ರಲ್ಲಿ ಈ ಪ್ರದೇಶಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಭೇಟಿಗೆ ಮುನ್ನ ಅಸ್ಸಾಂ ರೈಫಲ್ಸ್ ಜೊತೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಈ ಗುಂಪು ಭಾಗಿಯಾಗಿತ್ತು ಎಂದು ಶಂಕಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News