ಮಣಿಪುರ: ಶಸ್ತ್ರಾಸ್ತ್ರ ಕಸಿಯಲು ಗುಂಪುಯತ್ನ, ಕರ್ಫ್ಯೂ ಸಡಿಲಿಕೆ ರದ್ದು
ಇಂಫಾಲ: ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದ ಎರಡು ಜಿಲ್ಲೆಗಳಲ್ಲಿ ಬುಧವಾರ ಪೊಲೀಸ್ ಸಂಕೀರ್ಣದಿಂದ ಶಸ್ತ್ರಾಸ್ತ್ರ ಕಸಿಯಲು ಉದ್ರಿಕ್ತ ಗುಂಪುಗಳು ಪ್ರಯತ್ನ ನಡೆಸಿದ ಬೆನ್ನಲ್ಲೇ ಕರ್ಫ್ಯೂ ಸಡಿಲಿಕೆಯನ್ನು ರದ್ದುಪಡಿಸಲಾಗಿದೆ.
ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಮೊರೇಹ್ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿ ಹತ್ಯೆಗೈಯ್ಯಲ್ಪಟ್ಟ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ.
ಮೊರೆಹ್ ಉಪವಿಭಾಗ ಪೊಲೀಸ್ ಅಧಿಕಾರಿ (ಎಸ್ಡಿಪಿಓ) ಚಿಂಗ್ತಮ್ ಆನಂದ ಕುಮಾರ್ ಹತ್ಯೆಯಾಗಿ ಇತರ ಮೂವರು ಪೊಲೀಸರು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಮೀಟಿ ಜನಾಂಗದ ಪ್ರಾಬಲ್ಯ ಇರುವ ಇಂಫಾಲ್, ಮಂಗಳವಾರದಿಂದೀಚೆಗೆ ಉದ್ವಿಗ್ನವಾಗಿಯೇ ಉಳಿದಿದೆ. ಗಡಿ ಜಿಲ್ಲೆಯ ಈ ಪಟ್ಟಣದಲ್ಲಿ ಶಂಕಿತ ಆದಿವಾಸಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ಇದೆ.
ಬುಧವಾರ ಇಂಫಾಲ ಪಶ್ಚಿಮ ಜಿಲ್ಲೆಯ ಮಣಿಪುರ ರೈಫಲ್ಸ್ಗೆ ಸೇರಿದ ಒಂದನೇ ಬೆಟಾಲಿಯನ್ ಕಾಂಪ್ಲೆಕ್ಸ್ ಸುತ್ತುವರಿದ ಉದ್ರಿಕ್ತ ಗುಂಪು, ಶಸ್ತ್ರಾಸ್ತ್ರಗಳನ್ನು ನೀಡುವಂತೆ ಪೊಲೀಸರನ್ನು ಒತ್ತಾಯಿಸಿತು.
ಗುಂಪನ್ನು ಚದುರಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಹಲವು ಸುತ್ತುಗಳಲ್ಲಿ ಗುಂಡು ಹಾರಿಸಿದರು. ಹಲವು ಗಂಟೆಗಳ ಕಾಲ ಗುಂಡಿನ ಸದ್ದು ಈ ಭಾಗದಿಂದ ಕೇಳಿ ಬರುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಂಪು ಯಾವುದೇ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿಲ್ಲ ಮತ್ತು ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.