ಮಣಿಪುರ ಹೊತ್ತಿ ಉರಿಯುತ್ತಿದೆ,ಐರೋಪ್ಯ ಸಂಸತ್ತೂ ಅದನ್ನು ಚರ್ಚಿಸುತ್ತಿದೆ, ಆದರೆ ಪ್ರಧಾನಿ ತುಟಿಪಿಟಕ್ಕೆಂದಿಲ್ಲ: ರಾಹುಲ್ ಗಾಂಧಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ಹೊಸದಾಗಿ ವಾಗ್ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯರು,ಮಣಿಪುರದ ವಿಷಯದಲ್ಲಿ ಅವರ ವೌನವನ್ನು ಖಂಡಿಸಿದ್ದಾರೆ.
‘ಮಣಿಪುರ ಹೊತ್ತಿ ಉರಿಯುತ್ತಿದೆ. ಐರೋಪ್ಯ ಒಕ್ಕೂಟ ಸಂಸತ್ತು ಭಾರತದ ಆಂತರಿಕ ವಿಷಯವನ್ನು ಚರ್ಚಿಸುತ್ತಿದೆ. ಆದರೆ ಪ್ರಧಾನಿ ಒಂದೇ ಒಂದು ಪದವನ್ನು ಉಸುರಿಲ್ಲ. ಈ ನಡುವೆ ರಫೇಲ್ ಅವರಿಗೆ ಫ್ರಾನ್ಸ್ನಲ್ಲಿ ಬಾಸ್ಟಿಲ್ ಡೇ ಪರೇಡ್ಗೆ ಟಿಕೆಟ್ ಕೊಡಿಸಿದೆ ’ಎಂದು ರಾಹುಲ್ ಟ್ವೀಟಿಸಿದ್ದಾರೆ.
ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಅಧಿಕೃತ ಆಹ್ವಾನದ ಮೇರೆಗೆ ಜು.13-14ರಂದು ಆ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬಾಸ್ಟಿಲ್ ಡೇ ಆಚರಣೆಗಳಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಜೂ.29ರಂದು ಮಣಿಪುರಕ್ಕೆ ಭೇಟಿ ನೀಡಿದ್ದ ರಾಹುಲ್,‘ರಾಜ್ಯದಲ್ಲಿಯ ಸ್ಥಿತಿ ಶಮನಗೊಳ್ಳಲು ಶಾಂತಿಯ ಅಗತ್ಯವಿದೆ. ರಾಜ್ಯಕ್ಕೆ ಎರಡು ದಿನಗಳ ನನ್ನ ಭೇಟಿಯ ವೇಳೆ ನಮ್ಮ ಸೋದರರು ಮತ್ತು ಸೋದರಿಯರ ನೋವು ಕಂಡು ನನ್ನ ಹೃದಯ ಒಡೆದಿದೆ. ಶಾಂತಿಯೊಂದೇ ಮುಂದಿನ ದಾರಿಯಾಗಿದೆ ಮತ್ತು ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ ’ ಎಂದು ಟ್ವೀಟಿಸಿದ್ದರು.