ಮಣಿಪುರ:ಕರ್ತವ್ಯಕ್ಕೆ ಹಾಜರಾಗದಂತೆ ಸರಕಾರಿ ನೌಕರರಿಗೆ ಬುಡಕಟ್ಟು ಸಂಘಟನೆಯ ಆಗ್ರಹ
ಇಂಫಾಲ : ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್)ಯು,ಫೆ.14ರಂದು ವೀಡಿಯೊ ದೃಶ್ಯವೊಂದರಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡಿದ್ದ, ಹೆಡ್ ಕಾನಸ್ಟೇಬಲ್ ಅಮಾನತು ಕುರಿತಂತೆ ಕರ್ತವ್ಯಕ್ಕೆ ಹಾಜರಾಗದಂತೆ ಚುರಾಚಂದ್ರಪುರ ಜಿಲ್ಲೆಯಲ್ಲಿನ ಸರಕಾರಿ ನೌಕರರನ್ನು ಆಗ್ರಹಿಸಿದೆ. ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಅವರೇ ಹೊಣೆಯಾಗುತ್ತಾರೆ ಎಂದು ಅದು ಎಚ್ಚರಿಕೆಯನ್ನೂ ನೀಡಿದೆ.
ಹೆಡ್ ಕಾನ್ಸ್ಟೇಬಲ್ ಸಿಯಾಮ್ಲಾಲ್ಪಾವ್ಲ್ ಅಮಾನತನ್ನು ಹಿಂದೆಗೆದುಕೊಳ್ಳಬೇಕು ಹಾಗೂ ಪೋಲಿಸ್ ಅಧೀಕ್ಷಕ ಶಿವಾನಂದ ಸುರ್ವೆ ಮತ್ತು ಜಿಲ್ಲಾಧಿಕಾರಿ ಧರುಣ್ ಕುಮಾರ್ ಅವರನ್ನು ತಕ್ಷಣ ಎತ್ತಂಗಡಿ ಮಾಡಬೇಕು ಎಂಬ ತನ್ನ ಬೇಡಿಕೆಗಳ ಈಡೇರಿಕೆಗಾಗಿ ಒತ್ತಡ ಹೇರುವುದು ಸರಕಾರಿ ನೌಕರರಿಗೆ ಐಟಿಎಲ್ಎಫ್ ಆಗ್ರಹದ ಹಿಂದಿನ ಉದ್ದೇಶವಾಗಿದೆ.
ಫೆ.15ರಂದು ಹೆಡ್ ಕಾನ್ಸ್ಟೇಬಲ್ ಅಮಾನತಿನ ಬೆನ್ನಿಗೇ ಅದನ್ನು ವಿರೋಧಿಸಿ ಗುಂಪೊಂದು ಎಸ್ಪಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಿರುವ ಚುರಾಚಂದ್ರಪುರದ್ಲ್ಲಿಯ ಸರಕಾರಿ ಸಂಕೀರ್ಣಕ್ಕೆ ನುಗ್ಗಿ ವಾಹನಗಳಿಗೆ ಬೆಂಕಿಯಿಟ್ಟಿತ್ತು ಮತ್ತು ಸರಕಾರಿ ಆಸ್ತಿಗಳನ್ನು ಧ್ವಂಸಗೊಳಿಸಿತ್ತು. ಭದ್ರತಾ ಪಡೆಗಳು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟು, 30 ಜನರು ಗಾಯಗೊಂಡಿದ್ದರು.